Ghaziabad: ಭೋಜ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೇಪರ್ ಮಿಲ್‌ನಲ್ಲಿ (Paper Mill) ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಬಾಯ್ಲರ್ ಸ್ಪೋಟಗೊಂಡು ಮೂವರು ಕಾರ್ಮಿಕರು ಮೃತರಾಗಿದ್ದಾರೆ.
ಸ್ಫೋಟದ ತೀವ್ರತೆಗೆ ಕಾರ್ಮಿಕರು ಗಾಳಿಯಲ್ಲಿ ಹಾರಿ ಸುಮಾರು 50 ಅಡಿ ದೂರಕ್ಕೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಹಲವಾರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರ ದೇಹದ ಭಾಗಗಳು ಸುಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಮೃತರನ್ನು ಯೋಗೇಂದ್ರ, ಅನುಜ್ ಮತ್ತು ಅವಧೇಶ್ ಎಂದು ಗುರುತಿಸಲಾಗಿದೆ. ಅವರ ವಯಸ್ಸಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕಾರ್ಖಾನೆಯ ಮಾಲೀಕ ಅವೀಶ್ ಮೋದಿನಗರದಲ್ಲಿ ವಾಸವಾಗಿದ್ದಾರೆ ಎಂದು ಗ್ರಾಮೀಣ ಡಿಸಿಪಿ ಸುರೇಂದ್ರ ನಾಥ್ ತಿವಾರಿ ತಿಳಿಸಿದ್ದಾರೆ.
ಈ ಪೇಪರ್ ಮಿಲ್ ಲ್ಯಾಮಿನೇಷನ್ ಪೇಪರ್ ತಯಾರಿಸುತ್ತಿದ್ದು, ಘಟನೆಯ ನಂತರ ಮೃತ ಕಾರ್ಮಿಕರ ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿವಾರಿ ಹೇಳಿದ್ದಾರೆ.