Santo Domingo: ಡೊಮಿನಿಕನ್ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿರುವ ಐಕಾನಿಕ್ ಜೆಟ್ ಸೆಟ್ ನೈಟ್‌ಕ್ಲಬ್‌ನ (Iconic nightclub) ಛಾವಣಿ ಮಂಗಳವಾರ ಕುಸಿದ ಪರಿಣಾಮ, ಕನಿಷ್ಠ 79 ಮಂದಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 160 ಜನರಿಗೆ ಗಂಭೀರ ಗಾಯಗಳು ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಸಿದ್ಧ ನೈಟ್‌ಕ್ಲಬ್‌ನಲ್ಲಿ ನಡೆಯುತ್ತಿದ್ದ ಮೆರೆಂಗ್ಯೂ ಸಂಗೀತ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಪ್ರಸಿದ್ಧರು ಭಾಗವಹಿಸಿದ್ದರು.
ದುರಂತದ ನಂತರ ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹುಡುಕುವ ಕೆಲಸ ನಡೆಯುತ್ತಿದೆ. ತುರ್ತು ಕಾರ್ಯಾಚರಣೆ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ಹೇಳಿದಂತೆ, “ನಾವು ಶೋಧ ಕಾರ್ಯವನ್ನು ಮುಂದುವರೆಸುತ್ತಿದ್ದು, ಸಿಲುಕಿದವರ ಪ್ರಾಣ ಉಳಿಸಲು ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ.”
ಛಾವಣಿ ಕುಸಿತದ ಸುಮಾರು 12 ಗಂಟೆಗಳ ನಂತರ ಕೂಡ ರಕ್ಷಣಾ ಸಿಬ್ಬಂದಿ ಬದುಕುಳಿದವರನ್ನು ಹೊರತೆಗೆಯುತ್ತಿದ್ದಾರೆ. ಕಾಪಾಡಿ, ಕಾಪಾಡಿ ಎಂಬ ಶಬ್ಧಗಳು ಅವಶೇಷಗಳಡಿ ಕೇಳಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಭೀಕರ ಘಟನೆಗೆ ರಾಜಕೀಯ ಮತ್ತು ಕ್ರೀಡಾ ಲೋಕದವರೂ ಬಲಿಯಾಗಿದ್ದಾರೆ. ಮಾಂಟೆಕ್ರಿಸ್ಟಿ ಪ್ರದೇಶದ ಗವರ್ನರ್ ನೆಲ್ಸಿ ಕ್ರೂಜ್ ಅವರ ಸಹೋದರಿ, ಮೇಜರ್ ಲೀಗ್ ಬೇಸ್ಬಾಲ್ ಆಟಗಾರ ನೆಲ್ಸನ್ ಕ್ರೂಜ್ ಅವರ ಸಹೋದರಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಅಲ್ಲದೆ ಸ್ಥಳೀಯ ಶಾಸಕ ಬ್ರೇ ವರ್ಗಾಸ್ ಕೂಡ ಗಾಯಗೊಂಡಿದ್ದಾರೆ.
ಘಟನೆ ವೇಳೆ ಮೆರೆಂಗ್ಯೂ ಗಾಯಕ ರುಬ್ಬಿ ಪೆರೆಜ್ ಅವರ ಸಂಬಂಧಿಕರು ಸ್ಥಳದಲ್ಲಿದ್ದರು ಎಂಬ ಸುದ್ದಿ ಹರಡಿದರೂ, ಅವರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭಿಸಿಲ್ಲ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.







