Kolkata: ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Wakf Amendment Act) ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸ್ಪಷ್ಟಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಜೈನ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, “ಈ ಕಾಯ್ದೆಯಿಂದ ನೀವು ನೊಂದಿದ್ದೀರಾ ಎಂಬ ವಿಷಯ ತಿಳಿದಿದೆ. ಬಂಗಾಳದಲ್ಲಿ ಇದನ್ನು ಜಾರಿಗೆ ತರಲಾಗದು. ಮುಸ್ಲಿಂ ಸಮುದಾಯ ಮತ್ತು ಅವರ ಆಸ್ತಿಯನ್ನು ನಾನು ರಕ್ಷಿಸುತ್ತೇನೆ” ಎಂದು ಭರವಸೆ ನೀಡಿದರು.
ಅವರು ಮುಂದುವರೆದು, “ಬಿಜೆಪಿಯ ವಿಭಜನೆಯ ರಾಜಕೀಯ ನೀತಿಯನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು. ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ರಾಜಕೀಯ ಪ್ರಚೋದನೆಗೆ ಬಲಿಯಾಗಬೇಡಿ. ಈ ದೇಶದಲ್ಲಿ ಎಲ್ಲರಿಗೂ ಸುರಕ್ಷತೆ ನೀಡುವುದು ನಮ್ಮ ಜವಾಬ್ದಾರಿ” ಎಂದರು.
“ಭಾರತ, ಬಂಗಾಳ, ಬಾಂಗ್ಲಾದೇಶ, ಪಾಕಿಸ್ತಾನ—ಎಲ್ಲ ಒಂದೇ ಪ್ರದೇಶದ ಭಾಗಗಳಾಗಿದ್ದವು. ಈಗಲೂ ವಿವಿಧ ಸಮುದಾಯದವರು ಒಂದಾಗಿ ಬದುಕುತ್ತಿದ್ದಾರೆ. ಒಟ್ಟಾಗಿ ಇದ್ದರೆ, ಜಗತ್ತನ್ನೇ ಗೆಲ್ಲಬಹುದು” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ವಕ್ಫ್ (ತಿದ್ದುಪಡಿ) ಮಸೂದೆಗೆ ಏಪ್ರಿಲ್ 3 ರಂದು ಲೋಕಸಭೆಯಲ್ಲಿ ಹಾಗೂ ಏಪ್ರಿಲ್ 4 ರಂದು ರಾಜ್ಯಸಭೆಯಲ್ಲಿ ಚರ್ಚೆಯ ಬಳಿಕ ಅಂಗೀಕಾರ ದೊರೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 6ರಂದು ಅದಕ್ಕೆ ಅನುಮೋದನೆ ನೀಡಿದರು. ಇದರಿಂದಾಗಿ, ಈ ಕಾಯ್ದೆ ಏಪ್ರಿಲ್ 8 ರಿಂದ ದೇಶದಲ್ಲಿ ಜಾರಿಗೆ ಬಂತು.