ಭಾರತ ಮತ್ತು ಬಾಂಗ್ಲಾದೇಶ (Bangladesh) ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಇತ್ತೀಚೆಗೆ ಚೀನಾ ಪರ ಹೇಳಿಕೆ ನೀಡಿದ್ದರು. ಅವರು, ಭಾರತದ ಈಶಾನ್ಯ ರಾಜ್ಯಗಳು ಬಾಂಗ್ಲಾದೇಶದಿಂದ ಸುತ್ತುವರೆದಿವೆ ಮತ್ತು ಚೀನಾ ಅಲ್ಲಿ ಪ್ರಭಾವ ಹೊಂದಬೇಕು ಎಂದು ಹೇಳಿದರು. ಈ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದಕ್ಕೆ ತಕ್ಕ ಪ್ರತಿಕ್ರಿಯೆಯಾಗಿ, ಭಾರತವು ಬಾಂಗ್ಲಾದೇಶಕ್ಕೆ ನೀಡಿದ್ದ ಟ್ರಾನ್ಸ್‌ಶಿಪ್‌ಮೆಂಟ್ (ಮಾರ್ಗ ಮಧ್ಯೆ ಸಾಗಾಣಿಕೆ) ಸೌಲಭ್ಯವನ್ನು ರದ್ದುಗೊಳಿಸಿದೆ. ಇದರಿಂದ ಬಾಂಗ್ಲಾದೇಶ ತನ್ನ ರಫ್ತು ಸರಕುಗಳನ್ನು ಭಾರತ ಮಾರ್ಗವಾಗಿ ಇತರ ದೇಶಗಳಿಗೆ ಕಳುಹಿಸುವ ಅವಕಾಶವನ್ನು ಕಳೆದುಕೊಂಡಿದೆ.
ಈ ಸೌಲಭ್ಯವನ್ನು ಭಾರತ ಜೂನ್ 2020ರಲ್ಲಿ ಪರಿಚಯಿಸಿದ್ದಿತ್ತು. ಅದು ನೇಪಾಳ, ಭೂತಾನ್, ಮ್ಯಾನ್ಮಾರ್ ಮುಂತಾದ ದೇಶಗಳಿಗೆ ಬಾಂಗ್ಲಾದೇಶದಿಂದ ರಫ್ತು ಸರಕು ಸಾಗಾಣಿಕೆಗೆ ಸಹಾಯ ಮಾಡುತ್ತಿತ್ತು. ಆದರೆ, ಈಗ ಏಪ್ರಿಲ್ 8ರಂದು ಭಾರತ ಸರ್ಕಾರವು ಈ ವ್ಯವಸ್ಥೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಈ ನಿರ್ಧಾರದಿಂದಾಗಿ ಬಾಂಗ್ಲಾದೇಶಕ್ಕೆ ತೀವ್ರ ಆರ್ಥಿಕ ಹೊಡೆತ ಬೀಳಲಿದೆ. ಜವಳಿ, ಪಾದರಕ್ಷೆ, ಆಭರಣ ಮುಂತಾದ ವಸ್ತುಗಳ ರಫ್ತಿನಲ್ಲಿ ಬಾಂಗ್ಲಾದೇಶ ಭಾರತಕ್ಕೆ ಸ್ಪರ್ಧಿಯಾಗಿತ್ತು. ಸೌಲಭ್ಯ ರದ್ದಾದ ನಂತರ ಭಾರತದಲ್ಲಿನ ರಫ್ತು ಉದ್ಯಮಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ.
ಬಂಗಾಳ ಮತ್ತು ಆಂತರರಾಷ್ಟ್ರೀಯ ಸಂಬಂಧಗಳಲ್ಲಿ ಇದು ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಕರು ಹೇಳಿದ್ದಾರೆ.