ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ₹13,000 ಕೋಟಿ ರೂ. ಸಾಲ ವಂಚನೆಯ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು (Mehul Choksi) ಬೆಲ್ಜಿಯಂನಲ್ಲಿ (Belgium ) ಬಂಧಿಸಲಾಗಿದೆ. ಈ ಬಂಧನವನ್ನು ಭಾರತೀಯ ತನಿಖಾ ಸಂಸ್ಥೆಗಳ ಮನವಿಯ ಮೇರೆಗೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅವರ ಬಂಧನೆಯ ಬಗ್ಗೆ ಅಧಿಕೃತ ದೃಢೀಕರಣ ಹಾಗೂ ಹೆಚ್ಚಿನ ಮಾಹಿತಿ ಇನ್ನೂ ನಿರೀಕ್ಷೆಯಲ್ಲಿದೆ.
ಭಾರತದ ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರ ತನಿಖಾ ದಳ (CBI) ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ಸರ್ಕಾರವನ್ನು ಕೇಳಿಕೊಂಡಿದ್ದವು. 65 ವರ್ಷದ ಚೋಕ್ಸಿಯನ್ನು ಏಪ್ರಿಲ್ 12 ರಂದು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅವರು ತಮ್ಮ ಪತ್ನಿ ಪ್ರೀತಿಯೊಂದಿಗೆ ಆಂಟ್ವರ್ಪ್‌ನಲ್ಲಿ ‘ರೆಸಿಡೆನ್ಸಿ ಕಾರ್ಡ್’ ಹೊಂದಿದ್ದು ವಾಸವಾಗಿದ್ದರು. ಚೋಕ್ಸಿ ಅನಾರೋಗ್ಯ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಅವರು ಜಾಮೀನು ಕೋರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅವರನ್ನು ಬೇಗನೆ ಭಾರತಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಬೆಲ್ಜಿಯಂ ನ್ಯಾಯಾಲಯಗಳಲ್ಲಿ ಕಾನೂನು ಸಂಬಂಧಿತ ಅಡಚಣೆಗಳ ಕಾರಣದಿಂದ ಈ ಪ್ರಕ್ರಿಯೆ ವಿಳಂಬವಾಗಬಹುದೆಂದು ಹೇಳಲಾಗಿದೆ.
ಚೋಕ್ಸಿ, ಅವರ ಕುಟುಂಬ ಮತ್ತು ಉದ್ಯೋಗಿಗಳು, ಜೊತೆಗೆ ಕೆಲವು ಬ್ಯಾಂಕ್ ಅಧಿಕಾರಿಗಳು PNB ಬ್ಯಾಂಕಿನಲ್ಲಿ ವಂಚನೆ ಮಾಡಿದ ಆರೋಪದ ಮೇಲೆ 2018ರಲ್ಲಿ ED ಮತ್ತು CBI ತನಿಖೆ ಆರಂಭಿಸಿತ್ತು. ಇಡಿಗೆ ಪ್ರಕಾರ, ಚೋಕ್ಸಿ ಅವರ ಕಂಪನಿ ‘ಗೀತಾಂಜಲಿ ಜೆಮ್ಸ್’ ಮುಖಾಂತರ ಕೆಲವು ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ವಂಚನೆ ನಡೆಸಿದ್ದರು. ಈ ಸಂಬಂಧ ಇಡಿಗೆ ಈಗಾಗಲೇ ಮೂರು ಚಾರ್ಜ್ ಶೀಟ್ ಸಲ್ಲಿಸಿದ್ದು, ಸಿಬಿಐ ಕೂಡ ತನಿಖೆ ಮುಂದುವರಿಸುತ್ತಿದೆ.