IPL 2025ರ ಸೀಸನ್-18ರಲ್ಲಿ ಈಗಾಗಲೇ 31 ಪಂದ್ಯಗಳು ಮುಕ್ತಾಯವಾಗಿವೆ. ಆದರೆ ಈ ನಡುವೆ ಕೆಲವರು ಮ್ಯಾಚ್ ಫಿಕ್ಸಿಂಗ್ (matche fixing) ಮಾಡಲು ಯತ್ನಿಸುತ್ತಿದ್ದಾರೆ ಎಂಬ ಶಂಕೆ ಹೊರಬಿದ್ದಿದೆ. ಇದರ ಬೆನ್ನಲ್ಲೇ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಎಲ್ಲಾ 10 ತಂಡಗಳಿಗೂ ಎಚ್ಚರಿಕೆ ನೀಡಿದೆ. ಯಾರಾದರೂ ಅನುಮಾನಾಸ್ಪದವಾಗಿ ಸಂಪರ್ಕಿಸಿದರೆ ತಕ್ಷಣ ವರದಿ ಮಾಡಬೇಕು ಎಂಬ ಸೂಚನೆಯು ದೊರೆತಿದೆ.
ACSU ಮಾಹಿತಿ ಪ್ರಕಾರ, ಫಿಕ್ಸಿಂಗ್ ಮಾಡಲು ಕೆಲವರು ಅಭಿಮಾನಿಗಳಂತೆ ವರ್ತಿಸಿ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ, ತಂಡದ ಮಾಲೀಕರು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ದುಬಾರಿ ಉಡುಗೊರೆ ನೀಡುವುದು, ಖಾಸಗಿ ಪಾರ್ಟಿಗೆ ಆಹ್ವಾನಿಸುವುದು ಮುಂತಾದ ಮಾರ್ಗಗಳನ್ನು ಬಳಸುತ್ತಿದ್ದಾರೆ.
ಕ್ರಿಕ್ಬಜ್ ವರದಿಯ ಪ್ರಕಾರ, ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಈ ಯತ್ನದ ಹಿಂದೆ ಇದ್ದಾರೆ ಎಂದು ಶಂಕಿಸಲಾಗಿದೆ. ಅವರು ಈಗಾಗಲೇ ಬುಕ್ಕಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಈ ವ್ಯಕ್ತಿಯು ಹಿಂದೆ ಕೂಡ ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾಗಿರುವ ಮಾಹಿತಿ ಇದೆ.
ಈ ವ್ಯಕ್ತಿ ಆಟಗಾರರ ಹೋಟೆಲ್, ಪಂದ್ಯ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಅಭಿಮಾನಿಯಂತೆ ನಟಿಸಿ ಆಟಗಾರರು ಮತ್ತು ಅವರ ಕುಟುಂಬ ಸದಸ್ಯರನ್ನು ದುಬಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ವಿದೇಶದಲ್ಲಿರುವ ಸಂಬಂಧಿಕರೊಂದಿಗೆ ಕೂಡ ಸಂಪರ್ಕ ಸಾಧಿಸಲು ಪ್ರಯತ್ನಿಸಿರುವುದು ವರದಿಯಾಗಿದೆ.
2013 ರಲ್ಲಿ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು ನಡೆದಿದ್ದವು. ಅದರಲ್ಲಿ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಬಂಧನಕ್ಕೊಳಗಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು 2 ವರ್ಷಗಳ ಕಾಲ ಬ್ಯಾನ್ ಆಗಿದ್ದವು. ಈಗ ಮತ್ತೆ ಫಿಕ್ಸಿಂಗ್ ಭೀತಿ ಎದುರಾಗಿದ್ದು, ಬಿಸಿಸಿಐ ಅಗತ್ಯ ಕ್ರಮ ಕೈಗೊಂಡಿದೆ.
ಇನ್ನು ಮುಂದೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ACSUಗೆ ಮಾಹಿತಿ ನೀಡಬೇಕು ಎಂಬ ಸಂದೇಶವನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.