Bengaluru: ಕರ್ನಾಟಕದ ಹೆಮ್ಮೆಯ ನಂದಿನಿ ಹಾಲು (Nandini milk) ಬ್ರ್ಯಾಂಡ್ ಈಗ ದಕ್ಷಿಣ ಭಾರತದ ಮೀರಿದ ಮಾರುಕಟ್ಟೆಯಲ್ಲಿ ಹೆಜ್ಜೆ ಇಡಲು ಸಜ್ಜಾಗಿದೆ. ಈಗಾಗಲೇ ದೆಹಲಿಯಲ್ಲಿ ಯಶಸ್ವಿಯಾಗಿ ಮಾರಾಟ ಆರಂಭಿಸಿದ KMF (Karnataka Milk Federation-KMF) ಈಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ನಂದಿನಿ ಉತ್ಪನ್ನಗಳ ಮಾರಾಟ ಮಾಡಲು ಯೋಜನೆ ರೂಪಿಸಿದೆ.
ರಾಜಸ್ಥಾನದಲ್ಲಿ ಹಾಲು ಸಂಗ್ರಹ ಹಾಗೂ ಪ್ಯಾಕಿಂಗ್ ಮಾಡಲು ಹೊಸ ಕೇಂದ್ರಗಳನ್ನು ಸ್ಥಾಪಿಸುವ ಯೋಚನೆಯಲ್ಲಿದೆ. ಇದರಿಂದ ಉತ್ತರ ಭಾರತ ಮಾರುಕಟ್ಟೆಯಲ್ಲಿ ತನ್ನ ಹಾಲು ಉತ್ಪನ್ನಗಳನ್ನು ಸುಲಭವಾಗಿ ಪೂರೈಕೆ ಮಾಡಬಹುದು. ಮಧ್ಯಪ್ರದೇಶದಲ್ಲಿಯೂ ಇದೇ ರೀತಿ ಪ್ಯಾಕಿಂಗ್ ಘಟಕಗಳನ್ನು ಆರಂಭಿಸುವ ಮೂಲಕ ಕೊಲ್ಡ್ ಸ್ಟೋರೇಜ್ ಖರ್ಚು ಕಡಿಮೆ ಮಾಡಬೇಕು ಎಂಬ ಉದ್ದೇಶವಿದೆ.
ಈ ಕೇಂದ್ರಗಳು ನಂದಿನಿ ಉತ್ಪನ್ನಗಳನ್ನು ತಾಜಾ ಸ್ಥಿತಿಯಲ್ಲಿ ಶೀಘ್ರವಾಗಿ ಮಾರುಕಟ್ಟೆಗೆ ತಲುಪಿಸಲು ಸಹಾಯಕವಾಗಲಿವೆ. ಹಾಲು ಮತ್ತು ಮಿಠಾಯಿ ಉತ್ಪನ್ನಗಳ ಪ್ಯಾಕಿಂಗ್ ಮಾರುಕಟ್ಟೆಗೆ ಹತ್ತಿರವಾಗಿರುವುದರಿಂದ ಗ್ರಾಹಕರಿಗೆ ವೇಗವಾಗಿ ತಲುಪಲು ಸಾಧ್ಯವಾಗುತ್ತದೆ.
ಇದಕ್ಕೆ ಜೊತೆಗೆ, ಕೆಎಂಎಫ್ ತನ್ನ ಬೇಕರಿ ವಿಭಾಗವನ್ನು ಸಹ ವಿಸ್ತರಿಸುತ್ತಿದ್ದು, ಈಗಾಗಲೇ ಮಾರಾಟದಲ್ಲಿರುವ ಬ್ರೆಡ್, ಬನ್, ಕ್ರೀಮ್ ಬನ್, ಸ್ಲೈಸ್ ಕೇಕ್, ಹಣ್ಣು ಕೇಕ್, ಕಪ್ ಕೇಕ್, ಮಫಿನ್ ಮುಂತಾದ ಹೊಸ ಉತ್ಪನ್ನಗಳನ್ನು ಸೇರಿಸಲು ಯೋಚನೆ ಮಾಡುತ್ತಿದೆ. ಒಟ್ಟಿನಲ್ಲಿ 22 ರೀತಿ ಬೇಕರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಉದ್ದೇಶವಿದೆ.