ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರು ಭೀಕರ (Terrorists attack in Kashmir) ದಾಳಿಯನ್ನೆಸಗಿದ್ದು, ಗುಪ್ತಚರ ಇಲಾಖೆ (IB)ಯ ಅಧಿಕಾರಿಯಾಗಿದ್ದ ಮನೀಶ್ ರಂಜನ್ ಎಂಬವರು ಈ ಹೀನ ಕೃತ್ಯದಲ್ಲಿ ಮೃತಪಟ್ಟಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರವಾಸದಲ್ಲಿದ್ದು, ಅವರ ಮುಂದೆನೇ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.
ಮೂಲಭೂತವಾದದಲ್ಲಿ ತೊಡಗಿರುವ ಉಗ್ರರು ಈ ದಾಳಿಯನ್ನು ಏಪ್ರಿಲ್ 22 ರಂದು ನಡೆಸಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಬೈಸಾರಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಕಣಿವೆ ಪ್ರದೇಶವನ್ನು ಮಿನಿ ಸ್ವಿಟ್ಜರ್‌ಲ್ಯಾಂಡ್ ಎಂದು ಕರೆಯಲಾಗುತ್ತಿದ್ದು, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಹಲವಾರು ಕುಟುಂಬಗಳು ಪ್ರವಾಸಕ್ಕೆ ಬಂದಿದ್ದರು.
ಹೈದರಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಹಾರ ಮೂಲದ ಅಧಿಕಾರಿ ಮನೀಶ್ ರಂಜನ್ ರವರು ತಮ್ಮ ಕುಟುಂಬದೊಂದಿಗೆ ರಜೆ ತೆಗೆದುಕೊಂಡು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಆದರೆ, ಉಗ್ರರ ಅಮಾನವೀಯ ಹತ್ಯೆಯ ಶಿಕಾರಾಗಿದ್ದಾರೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಇದು ಮಾನವೀಯತೆಯ ವಿರುದ್ಧದ ಕೃತ್ಯವೆಂದು ಆಕ್ರೋಶ ವ್ಯಕ್ತಪಡಿಸಿದ್ದು, ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಈ ಹೀನ ಕೃತ್ಯವನ್ನು ಖಂಡಿಸಿ, ಮೃತರ ಕುಟುಂಬಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಶೀಘ್ರ ಗುಣಮುಖತೆ ಕೋರಿದ್ದಾರೆ.
ಉಗ್ರರ ದುಷ್ಕೃತ್ಯವನ್ನು ಖಂಡಿಸಿರುವ ಡಿಸಿಎಂ ಪವನ್ ಕಲ್ಯಾಣ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರಂತರ ಕ್ರಮಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದ್ದರೂ ಸಹ ಇನ್ನೂ ಕೆಲವೆಡೆ ಹೀನ ಮನಸ್ಥಿತಿಯ ಉಗ್ರರು ಇರುವುದು ಇದರಿಂದ ಗೊತ್ತಾಗಿದೆ ಎಂದು ಹೇಳಿದ್ದಾರೆ.
BRS ಪಕ್ಷದ ನಾಯಕ ಕೆ ಟಿ ರಾಮರಾವ್ ಕೂಡ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ಕೇಂದ್ರ ಸರಕಾರದಿಂದ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದ್ದಾರೆ.
ಈ ದಾಳಿಗೆ ಲಷ್ಕರ್-ಎ-ತೊಯ್ಬಾ ಸಂಬಂಧ ಹೊಂದಿರುವ “ದಿ ರೆಸಿಸ್ಟೆನ್ಸ್ ಫ್ರಂಟ್ (TRF)” ಸಂಘಟನೆಯು ಹೊಣೆ ಹೊತ್ತಿದೆ ಎಂದು ವರದಿಯಾಗಿದೆ.