Chikkaballapur : ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಕಡಲೆಕಾಯಿ ಪರಿಷೆ (Kadalekai Parishe) ಮತ್ತು ವೀರಾಂಜನೇಯ ಸ್ವಾಮಿ ರಥೋತ್ಸವ (Veeranjaneya Swamy Rathotsava) ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಚಿಕ್ಕಬಳ್ಳಾಪುರ ನಗರ ಹಾಗೂ ತಾಲ್ಲೂಕಿನ ಅನೇಕ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಉತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ವೀರಾಂಜನೇಯ ದೇವಾಲಯದಲ್ಲಿನ ಪ್ರಸನ್ನ ಮಹಾಗಣಪತಿ, ಕೋದಂಡರಾಮ ಹಾಗೂ ಆಂಜನೇಯ ದೇವರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಹೋಮ, ಮಹಾಮಂಗಳಾರತಿ ಒಳಗೊಂಡಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಜಡಲ ತಿಮ್ಮನಹಳ್ಳಿಯಿಂದ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ರಥೊತ್ಸವಕ್ಕೆ ತರಲಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Adichunchanagiri Nirmalanandanatha Swamiji), ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಂದನಾಥ ಸ್ವಾಮೀಜಿ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ದೇವಾಲಯದ ಆವರಣದಿಂದ ಮಠದ ಆವರಣದವರೆಗೂ ನಡೆದ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯದ ಆವರಣದಲ್ಲಿ ನಡೆದ ಕಡಲೆಕಾಯಿ ಪರಿಷೆಯಲ್ಲಿ ಕಡಲೆ ಕಾಯಿಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಿದರು.