ಉತ್ತರಾಖಂಡದ ಪವಿತ್ರ ಕೇದಾರನಾಥ ದೇವಾಲಯದ (Kedarnath temple) ಬಾಗಿಲುಗಳನ್ನು ಇಂದು (ಮೇ 2) ಶಾಸ್ತ್ರದ ಪ್ರಕಾರ ತೆರೆದಿದ್ದಾರೆ. ಮೊದಲ ದಿನ ಸುಮಾರು 15,000 ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಮುಖ್ಯ ಅರ್ಚಕ ಭೀಮಾಶಂಕರ್ ಲಿಂಗ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ದೇವಾಲಯವನ್ನು 108 ಕ್ವಿಂಟಲ್ ಹೂವಿನಿಂದ ಅಲಂಕರಿಸಲಾಗಿತ್ತು. ಈ ಹೂವುಗಳಲ್ಲಿ ಕೆಲವು ನೇಪಾಳ, ಥೈಲ್ಯಾಂಡ್ ಮತ್ತು ಶ್ರೀಲಂಕಾದಿಂದ ತರಲಾದವು. ಮೇ 1ರಂದು ಉಖಿಮಠದ ಓಂಕಾರೇಶ್ವರ ದೇವಸ್ಥಾನದಿಂದ ಪಂಚಮುಖಿ ಚಲಿಸುವ ದೇವರ ಮೂರ್ತಿಯನ್ನು ಡೋಲಿ ಮೂಲಕ ಕೇದಾರನಾಥಕ್ಕೆ ತಂದು ಬಾಗಿಲುಗಳನ್ನು ತೆರೆದಿದ್ದಾರೆ.
ಈ ಸಂದರ್ಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿಯಾಗಿರುವ ಪುಷ್ಕರ್ ಸಿಂಗ್ ಧಾಮಿ ಹಾಗೂ ಶಾಸಕಿ ಆಶಾ ನೌಟಿಯಾ ಉಪಸ್ಥಿತರಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಿ, ದೇಶದ ಶಾಂತಿ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥನೆ ಮಾಡಲಾಯಿತು.
ಅಕ್ಟೋಬರ್ ಅಥವಾ ನವೆಂಬರ್ ತಿಂಗಳೊಳಗೆ ಚಳಿಗಾಲ ಆರಂಭವಾದ ಮೇಲೆ ಈ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುವುದು. ಯಮುನೋತ್ರಿ, ಗಂಗೋತ್ರಿ ಹಾಗೂ ಬದ್ರಿನಾಥದ ದರ್ಶನಕ್ಕೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಮೂಲಕ ಚಾರ್ಧಾಮ್ ಯಾತ್ರೆ ಶ್ರದ್ಧಾ ಪೂರ್ವಕವಾಗಿ ಆರಂಭವಾಗಿದೆ.
ಇನ್ನು ಮುಂದೆ ಆರು ತಿಂಗಳ ಕಾಲ ದೇಶದ ಎಲ್ಲೆಡೆಯಿಂದ ಬರುವ ಭಕ್ತರಿಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬದ್ರಿನಾಥ-ಕೇದಾರನಾಥ ದೇಗುಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಪ್ರಸಾದ್ ಥಾಪ್ಲಿಯಾಲ್ ತಿಳಿಸಿದ್ದಾರೆ.








