Bengaluru: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA scam) ಹಗರಣದ ಸಂಬಂಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಮರುತನಿಖೆಗೆ ಮತ್ತಷ್ಟು ಕಾಲಾವಕಾಶ ಕೋರಿರುವ ಲೋಕಾಯುಕ್ತ ಪೊಲೀಸರ ಕ್ರಮಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ತನ್ನ ಕುಟುಂಬಸ್ಥರಿಗೆ ಅಕ್ರಮವಾಗಿ MUDA ನಿವೇಶನ ಪಡೆದಿರುವ ಆರೋಪದ ಕುರಿತು ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯು ಈಗಾಗಲೇ ಕೆಲವು ದಾಖಲೆಗಳನ್ನು ಲಕೋಟೆಯಲ್ಲಿ ಸಲ್ಲಿಸಿದ್ದರೂ ಕೂಡಾ ಮತ್ತೆ ಕಾಲಾವಕಾಶ ಕೋರಿರುವುದು ತೃಪ್ತಿಕರವಲ್ಲ ಎಂದು ಹೇಳಿದರು.
ಲೋಕಾಯುಕ್ತ ತನಿಖಾಧಿಕಾರಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಸೆಕ್ಷನ್ 17(A) ಅಡಿ ರಾಜ್ಯ ಸರ್ಕಾರದ ಅನುಮತಿ ನಿರೀಕ್ಷಿಸುತ್ತಿರುವುದರಿಂದ ತನಿಖೆ ಮುಂದುವರಿಸಲು ಸಮಯ ಬೇಕೆಂದು ಮನವಿ ಸಲ್ಲಿಸಿದ್ದರು. ಆದರೆ, ಈ ಕ್ರಮವನ್ನು ಪ್ರಶ್ನಿಸಿರುವ ಸ್ನೇಹಮಯಿ ಕೃಷ್ಣ ಅವರು, ಉದ್ದೇಶಪೂರ್ವಕ ವಿಳಂಬ ನಡೆಯುತ್ತಿದೆ ಎಂಬ ಆಕ್ಷೇಪವನ್ನೂ ಮುಂದಿಟ್ಟಿದ್ದಾರೆ.
ನ್ಯಾಯಾಲಯವು ತನಿಖಾಧಿಕಾರಿಗಳಿಗೆ ಮುಂದಿನ ವಿಚಾರಣೆಗೆ ಅಫಿಡವಿಟ್ (ಪ್ರಮಾಣಪತ್ರ) ರೂಪದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿದೆ. ಅಲ್ಲದೆ, ನ್ಯಾಯಾಲಯದ ಪ್ರಕ್ರಿಯೆ ವಿಳಂಬಗೊಳ್ಳುತ್ತಿರುವ ಬಗ್ಗೆ ಸ್ನೇಹಮಯಿ ಕೃಷ್ಣ ವ್ಯಕ್ತಪಡಿಸಿದ ಆತಂಕವನ್ನೂ ಪರಿಗಣಿಸಿದೆ.