Bengaluru: ಪಾಕಿಸ್ತಾನದಿಂದ ಯಾವುದೇ ಸಮಯದಲ್ಲಿ ಕಿತಾಪತಿ ಸಂಭವಿಸಬಹುದಾದ ಹಿನ್ನೆಲೆಯಲ್ಲಿ, ಭಾರತವು ತನ್ನ ಶತ್ರು ದೇಶಗಳ ಮೇಲೆ ಕಣ್ಣಿಡಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಪೈ ಸೆಟಿಲೈಟ್ ಗಳನ್ನು (spy satellites) ಬಳಕೆಗೆ ತಂದುಕೊಳ್ಳಲು ಯೋಜನೆ ಹಾಕಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಹೆಚ್ಚು ಸ್ಪೈ ಸೆಟಿಲೈಟ್ ಗಳನ್ನು ತಯಾರಿಸಿ, ಆಗಸದಲ್ಲಿ ನಿಯೋಜಿಸಲು ಸರ್ಕಾರ ಯೋಜಿಸಿದೆ.
ಪ್ರಸ್ತುತ, ಕೆಲ ಸ್ಪೈ ಸೆಟಿಲೈಟ್ ಗಳ ತಯಾರಿಕೆಗೆ ನೀಡಿದ ಡೆಡ್‌ಲೈನ್ ಅನ್ನು ಶೀಘ್ರಗತಿಯಲ್ಲಿ ಪೂರ್ಣಗೊಳ್ಳುವಂತೆ ಮೂರು ಕಂಪನಿಗಳಿಗೆ ಸೂಚಿಸಲಾಗಿದೆ. ಇವುಗಳಲ್ಲಿ ಎರಡು ಕಂಪನಿಗಳು ಬೆಂಗಳೂರು ಮೂಲದವು.
ಸರ್ವೇಲೆನ್ಸ್ ಸೆಟಿಲೈಟ್ ಗಳ ತಯಾರಿಕೆಗಾಗಿ ಗುತ್ತಿಗೆ ನೀಡಿದ ಕಂಪನಿಗಳು: ಹೈದರಾಬಾದ್‌ನ ಅನಂತ್ ಟೆಕ್ನಾಲಜೀಸ್, ಬೆಂಗಳೂರು ಮೂಲದ ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಕಂಪನಿಗಳು ಸರ್ವೇಲೆನ್ಸ್ ಸೆಟಿಲೈಟ್ ಗಳನ್ನು ತಯಾರಿಸಲು ಗುತ್ತಿಗೆ ಪಡೆದಿವೆ. ಈ ಸೆಟಿಲೈಟ್ ಗಳನ್ನು 2028ರ ಕೊನೆಗೂ ಪೂರ್ಣಗೊಳಿಸಲು ಅಗತ್ಯವಿತ್ತು, ಆದರೆ ಗಡುವನ್ನು 12-18 ತಿಂಗಳು ಮುಂಚಿತವಾಗಿ 2026ರೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಭಾರತದ ಗಡಿಯ ಮೇಲ್ವಿಚಾರಣೆಗೆ ಹೊಸ ಸ್ಪೈ ಸೆಟಿಲೈಟ್ ಯೋಜನೆ: 2024ರ ಅಕ್ಟೋಬರಿನಲ್ಲಿ, ಭಾರತವು ಬಾಹ್ಯಾಕಾಶ ಆಧಾರಿತ ಸರ್ವೇಲೆನ್ಸ್-3 ಮಿಷನ್ ಅನ್ನು ಪ್ರಾರಂಭಿಸಿತು. 3 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಯಲ್ಲಿ 52 ಸೆಟಿಲೈಟ್ ಗಳ ಜಾಲವನ್ನು ಭೂಕಕ್ಷೆಯಲ್ಲಿ ನಿಯೋಜಿಸುವ ಉದ್ದೇಶವಿದೆ. ಪ್ರಮುಖ ಉದ್ದೇಶವಾದುದು ಭಾರತದ ಗಡಿ ಪ್ರದೇಶಗಳನ್ನು ಗಮನಿಸುವುದು.
ಕಂಪನಿಗಳ ಇತಿಹಾಸ ಮತ್ತು ಇಸ್ರೋ ಸಹಯೋಗ: ಅನಂತ್ ಟೆಕ್ನಾಲಜೀಸ್, ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಆಲ್ಫ ಡಿಸೈನ್ ಟೆಕ್ನಾಲಜೀಸ್ ಕಂಪನಿಗಳು ಇಸ್ರೋಗೆ ಭದ್ರತಾ ಉಪಗ್ರಹಗಳ ನಿರ್ಮಾಣದಂತಹ ಹಲವು ಸೇವೆಗಳನ್ನು ನೀಡುತ್ತಾ ಬಂದಿವೆ. ಈ ಕಂಪನಿಗಳು 2024ರ ಸ್ಪೈ ಸೆಟಿಲೈಟ್ ಯೋಜನೆಯಲ್ಲಿ ಭಾಗಿಯಾಗಿವೆ. ಅನಂತ್ ಟೆಕ್ನಾಲಜೀಸ್‌ನ ಒಂದು ಸೆಟಿಲೈಟ್ ಈಗ ಅಂತಿಮ ಹಂತದಲ್ಲಿದೆ ಮತ್ತು 2024ರ ನಂತರ ನಭಕ್ಕೆ ಕಳುಹಿಸಲು ಯೋಜನೆ ಇದೆ.