ಭಾರತೀಯ ವಿದ್ಯಾರ್ಥಿಗಳಿಗೆ ಈಗ ವಿದೇಶಕ್ಕೆ ಹೋಗದೇ ದೇಶದಲ್ಲಿಯೇ ಲಿವರ್ಪೂಲ್ ವಿಶ್ವವಿದ್ಯಾಲಯದಿಂದ (University of Liverpool) ಉನ್ನತ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ. ಯುಕೆಯ ಪ್ರಸಿದ್ಧ ಲಿವರ್ಪೂಲ್ ವಿಶ್ವವಿದ್ಯಾಲಯವು ತನ್ನ ಮೊದಲ ಕ್ಯಾಂಪಸ್ ಬೆಂಗಳೂರಿನಲ್ಲಿ ಆರಂಭಿಸುತ್ತಿದೆ.
1881 ರಲ್ಲಿ ಇಂಗ್ಲೆಂಡ್‌ನಲ್ಲಿ ಸ್ಥಾಪಿತವಾದ ಲಿವರ್ಪೂಲ್ ವಿಶ್ವವಿದ್ಯಾಲಯ 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೆಂಗಳೂರು ಕ್ಯಾಂಪಸ್‌ನಲ್ಲಿ ಪ್ರವೇಶ ಶುರುಮಾಡಲಿದೆ. ಕಾನೂನು, ವ್ಯಾಪಾರ ಮತ್ತು ಆರೋಗ್ಯ ವಿಜ್ಞಾನ ವಿಭಾಗಗಳಲ್ಲಿ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸುತ್ತಿದೆ. ದೇಶದಲ್ಲಿ ಪ್ರೀಮಿಯಂ ಮಟ್ಟದ ಶಿಕ್ಷಣ ನೀಡುವ ಗುರಿಯಿದೆ.
ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲಿವರ್ಪೂಲ್ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅನುಮೋದನೆ ಪತ್ರ ನೀಡಿದ್ದು, ಇದು ಹೊಸ ಶಿಕ್ಷಣ ನೀತಿ 2020 ಅಡಿಯಲ್ಲಿ ಸಾಧ್ಯವಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ಆರಂಭಿಸಲು ಯುಜಿಸಿಯಿಂದ ಅನುಮತಿ ಸಿಕ್ಕಿದ್ದು, ಲಿವರ್ಪೂಲ್ ಕೂಡ ಇದರ ಭಾಗವಾಗಿದೆ.
ಲಿವರ್ಪೂಲ್ ಜೊತೆಗೆ, ಯುಎಸ್ಎನ ಇಲಿನಾಯ್ಸ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್, ಆಸ್ಟ್ರೇಲಿಯಾದ ವಿಕ್ಟೋರಿಯಾ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯಗಳು ಹಾಗೂ ಇಟಲಿಯ ಇಸ್ಟಿಟುಟೊ ಯುರೋಪಿಯೊ ಡಿ ಡಿಸೈನ್ ಭಾರತದಲ್ಲಿ ಕ್ಯಾಂಪಸ್ ಆರಂಭಿಸಲು ಅನುಮತಿ ಪಡೆದಿವೆ. ಇನ್ನೂ 6 ಕ್ಯಾಂಪಸ್‌ಗಳ ಅನುಮತಿ ಪ್ರಕ್ರಿಯೆಯಲ್ಲಿ ಇದೆ. ಮುಂದಿನ ದಿನಗಳಲ್ಲಿ 15 ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ.







