Sangareddy (Telangana): ಪಾಶಾಮಿಲಾರಾಮ್ ಕೈಗಾರಿಕಾ ಪ್ರದೇಶದಲ್ಲಿರುವ ಫಾರ್ಮಾ ಕಂಪನಿಯೊಂದರಲ್ಲಿ (Telangana pharma company) ಭೀಕರ ಸ್ಪೋಟ ಸಂಭವಿಸಿದ್ದು, ಇದರಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಹಲವಾರು ಮೃತದೇಹಗಳು ಅವಶೇಷಗಳಡಿ ಸಿಲುಕಿದ್ದು, 31 ಶವಗಳು ಸ್ಥಳದಲ್ಲೇ ಪತ್ತೆಯಾದರೆ, ಮೂವರು ಆಸ್ಪತ್ರೆಗೆ ಕೊಂಡೊಯ್ಯಲಾದ ಬಳಿಕ ಸಾವನ್ನಪ್ಪಿದ್ದಾರೆ.
ಜಿಲ್ಲಾ SP ಪರಿತೋಷ್ ಪಂಜಕ್ ಅವರು “ರಕ್ಷಣಾ ಕಾರ್ಯ ಅಂತಿಮ ಹಂತದಲ್ಲಿದೆ” ಎಂದು ಹೇಳಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳಕ್ಕೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಆರೋಗ್ಯ ಸಚಿವ ಸಿ. ದಾಮೋದರ್ ರಾಜನರಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ 8.15ರಿಂದ 9.35ರ ನಡುವೆ ರಾಸಾಯನಿಕ ಪ್ರತಿಕ್ರಿಯೆಯಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ಸಮಯದಲ್ಲಿ ಕಾರ್ಖಾನೆಯಲ್ಲಿ ಸುಮಾರು 90 ಜನರು ಕೆಲಸ ಮಾಡುತ್ತಿದ್ದರು ಎಂದು ಐಜಿಪಿ ವಿ. ಸತ್ಯನಾರಾಯಣ ತಿಳಿಸಿದ್ದಾರೆ.
ಅಗ್ನಿಶಾಮಕ ದಳ, NDRF ಹಾಗೂ SDRF ತಂಡಗಳು ಬೆಂಕಿ ನಂದಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗೆ ತೊಡಗಿವೆ.
ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಪರಿಹಾರ ಘೋಷಿಸಿದ್ದಾರೆ.
ಸ್ಫೋಟದ ಬಳಿಕ ಪರಿಸರದಲ್ಲಿ ಬೆಂಕಿಯಿಂದ ಸುಟ್ಟ ಶವಗಳು, ಗಾಯಾಳುಗಳ ಕಿರುಚಾಟ ಮತ್ತು ದುರ್ವಾಸನೆಯು ಭೀತಿಯ ವಾತಾವರಣವನ್ನುಂಟುಮಾಡಿದೆ.
ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಒಳಗಿನ ಪೈಪ್ಲೈನ್‌ಗಳು, ಗರ್ಡರ್‌ಗಳು ಹಾಗೂ ಸಿಮೆಂಟ್ ತೊಲೆಗಳು ಕರಗಿ ಹೋಗಿವೆ. ಇವುಗಳನ್ನು ಕ್ರೇನ್ ಮೂಲಕ ತೆಗೆಯಲು ಹೆಚ್ಚಿನ ಸಮಯ ಬೇಕು.
ಮೃತದೇಹಗಳು ತುಂಬಾ ಸುಟ್ಟಿರುವ ಕಾರಣದಿಂದ ಡಿಎನ್ಎ ಪರೀಕ್ಷೆ ಮೂಲಕವೇ ಗುರುತಿಸುವುದು ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ ಹೋಲಿಕೆ ಮಾಡಿ ಶವ ಹಸ್ತಾಂತರಿಸುವ ಪ್ರಕ್ರಿಯೆ ಮುಂದುವರಿಯಲಿದೆ.