New Delhi: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 1 ರಿಂದ ಜಾರಿಗೆ ಬರುವಂತೆ ಕೇಶವನ್ ರಾಮಚಂದ್ರನ್ (Keshavan Ramachandran) ಅವರನ್ನು ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಿದೆ. ಅವರು ಪ್ರುಡೆನ್ಶಿಯಲ್ ನಿಯಂತ್ರಣ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ ಎಂದು RBI ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಡ್ತಿಗೆ ಮುನ್ನ, ರಾಮಚಂದ್ರನ್ ಅಪಾಯ ನಿಗಾ ವಿಭಾಗದಲ್ಲಿ ಪ್ರಧಾನ ಮುಖ್ಯ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕರೆನ್ಸಿ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಮೇಲ್ವಿಚಾರಣೆ, ತರಬೇತಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ 30 ವರ್ಷಕ್ಕೂ ಹೆಚ್ಚು ಅನುಭವ ಹೊಂದಿದ್ದಾರೆ.
ರಾಮಚಂದ್ರನ್ RBI ಸ್ಟಾಫ್ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಐದು ವರ್ಷಗಳ ಕಾಲ ಕೆನರಾ ಬ್ಯಾಂಕ್ ಮಂಡಳಿಯ ಸದಸ್ಯರಾಗಿದ್ದು, ಎರಡು ವರ್ಷಗಳ ಕಾಲ ICAI ನ ಆಡಿಟಿಂಗ್ ಬೋರ್ಡ್‌ನಲ್ಲಿ RBI ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.
ರಾಮಚಂದ್ರನ್ ಅವರು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು MBA ಹೊಂದಿದ್ದಾರೆ. ಜೊತೆಗೆ, ಯುನೈಟೆಡ್ ಕಿಂಗ್ಡಮ್‌ನ ACCA ಸಂಸ್ಥೆಯಿಂದ ಅಂತಾರಾಷ್ಟ್ರೀಯ ಹಣಕಾಸು ವರದಿ ವಿಷಯದಲ್ಲಿ ಡಿಪ್ಲೊಮಾ ಮತ್ತು IIBF ನ ಪ್ರಮಾಣಿತ ಸಹವರ್ತಿ ಪದವಿಯುಳ್ಳವರು.