ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚತ್ರೂ ಎಂಬ ಸ್ಥಳದ ದಟ್ಟ ಕಾಡಿನಲ್ಲಿ ಅಡಗಿರುವ ಉಗ್ರರನ್ನು (terrorists) ಪತ್ತೆಹಚ್ಚಲು ಭದ್ರತಾ ಪಡೆಯವರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚತ್ರೂ ಪ್ರದೇಶದ ಕಂಝಲ್ ಮಂದು ಎಂಬ ಕಾಡಿನಲ್ಲಿ ಬುಧವಾರ ಸಂಜೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆಯಿತು. ಕಾಡು ಪ್ರದೇಶವಾಗಿದ್ದು ಮತ್ತು ಕತ್ತಲಿರುವ ಕಾರಣದಿಂದ ರಾತ್ರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ ಆ ಪ್ರದೇಶವನ್ನು ಸುತ್ತುವರೆಯಲಾಗಿತ್ತು.
ಇಂದು ಮುಂಜಾನೆ ಪುನಃ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಉಗ್ರರು ಕಾಡಿನೊಳಗಿನ ಕತ್ತಲು ಪ್ರದೇಶಗಳಲ್ಲಿ ಅಡಗಿ ಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಸೇನೆಯ ‘ವೈಟ್ ನೈಟ್ ಕಾರ್ಪ್ಸ್’ ಎಂಬ ವಿಭಾಗವು ಕೂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, “ಆಪರೇಶನ್ ಚತ್ರೂ” ಎಂಬ ಹೆಸರಿನಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಮಾಹಿತಿ ನೀಡಿದೆ.
ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಭದ್ರತಾ ಪಡೆಗಳಿಂದ ಉಗ್ರರ ಮೇಲೆ ಕಣ್ಣಿಟ್ಟಿದೆ.