Mangaluru: ಧರ್ಮಸ್ಥಳ ಗ್ರಾಮದಲ್ಲಿ ಹಲವು ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಗಂಭೀರ ಆರೋಪದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಒಬ್ಬ ವ್ಯಕ್ತಿ ವಕೀಲರ ಮುಖಾಂತರ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ (Dharmasthala) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜುಲೈ 3ರಂದು ನೀಡಿದ ದೂರಿನಲ್ಲಿ, ವ್ಯಕ್ತಿಯು ಈ ಹಿಂದೆ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ತನ್ನ ಮೂಲಕ ಗೋಪ್ಯವಾಗಿ ವಿಲೇವಾರಿ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗ ಪಾಪಪ್ರಜ್ಞೆಯಿಂದ ಬಳಲುತ್ತಿರುವ ಅವರು, ತನಗೂ ತನ್ನ ಕುಟುಂಬಕ್ಕೂ ಕಾನೂನಾತ್ಮಕ ರಕ್ಷಣೆ ದೊರೆತರೆ, ಇಡೀ ಸತ್ಯವನ್ನು ಬಹಿರಂಗಪಡಿಸಿ, ಮೃತದೇಹಗಳನ್ನು ಎಲ್ಲಿ ವಿಲೇವಾರಿ ಮಾಡಿದ್ದಾನೆಂಬ ವಿವರವನ್ನು ನೀಡಲು ಸಿದ್ಧನಿದ್ದಾನೆಂದು ತಿಳಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ನ್ಯಾಯಾಲಯದ ಅನುಮತಿ ಪಡೆದು, ಜುಲೈ 4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ (ಅ.ಕ್ರ: 39/2025, ಕಲಂ: 211(a) ಬಿಎನ್ಎಸ್ ಕಾಯಿದೆ). ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ದೂರುದಾರನು ತನ್ನ ಹೆಸರು ಮತ್ತು ಮಾಹಿತಿ ಗುಪ್ತವಾಗಿ ಇಡುವಂತೆ ಮನವಿ ಮಾಡಿಕೊಂಡಿರುವುದರಿಂದ, ಪೊಲೀಸರು ಅವರ ವಿವರಗಳನ್ನು ಬಹಿರಂಗಪಡಿಸಿರುವುದಿಲ್ಲ.
ಇನ್ನೊಂದು ಪ್ರಕಟಣೆಯಲ್ಲಿ, ದೂರಿಗೆ ಸಂಬಂಧಪಟ್ಟಂತೆ ಈಗಾಗಲೇ ಎರಡು ಶವಗಳ ತಲೆಬುರುಡೆ ಮತ್ತು ಇನ್ನಿತರ ಭಾಗಗಳ ಝೆರಾಕ್ಸ್ ಫೋಟೋಗಳನ್ನು ಮಾತ್ರ ಪೊಲೀಸರು ಸ್ವೀಕರಿಸಿದ್ದಾರೆ. ದೂರುದಾರನ ಪರವಾಗಿ ವಕೀಲರು, ಶವದ ಅವಶೇಷಗಳನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿದ್ದಾರೆ.