Managaluru: ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣವನ್ನು ತಡೆಯುವ ಉದ್ದೇಶದಿಂದ ಸರ್ಕಾರ ಮುಂದಿನ ಅಧಿವೇಶನದಲ್ಲಿ ಹೊಸ ಮಸೂದೆ ಮಂಡಿಸಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Parameshwara) ತಿಳಿಸಿದರು. ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಅವರು ಹೇಳಿದರು.
ಮಂಗಳೂರಿನಲ್ಲಿ ನಡೆದ ಶಾಂತಿ ಸಭೆಯ ಬಳಿಕ ಮಾತನಾಡಿದ ಸಚಿವರು, “ಅಗತ್ಯವಿದ್ದರೆ ಹೊಸ ಕಾನೂನು ತರಲಾಗುತ್ತದೆ. ಇದು ಸೈಬರ್ ಅಪರಾಧದ ಭಾಗವಾಗಿರುತ್ತದೆ,” ಎಂದು ಹೇಳಿದರು.
“ಶಾಂತಿ ಸಭೆ ಯಶಸ್ವಿಯಾಗಿ ನಡೆಯಿತು. ಯಾವುದೇ ವಿರೋಧಾತ್ಮಕ ಮಾತುಗಳು ಇಲ್ಲದೆ ಎಲ್ಲರೂ ಸಹಕಾರ ನೀಡಿದರು. ಗೋಹತ್ಯೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತದೆ. ಯಾವುದೇ ಕಾನೂನು ಉಲ್ಲಂಘನೆಗೆ ತಾನೇ ಆದರೂ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುತ್ತದೆ,” ಎಂದು ಹೇಳಿದರು.
“ಯಾವುದೇ ಅಕ್ರಮ ನಡೆಯುತ್ತಿದ್ದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಎಲ್ಲರೂ ಕಾನೂನಿಗೆ ವಿಧೇಯರಾಗಿರಬೇಕು,” ಎಂದರು.
ಶಾಂತಿ ಸಭೆಯಲ್ಲಿ 38ಕ್ಕೂ ಹೆಚ್ಚು ಜನ ಪ್ರಮುಖರು ಭಾಗವಹಿಸಿದ್ದರು. ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ, ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ, ಗೋಹತ್ಯೆಗಳಂತಹ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಇವು ಜಿಲ್ಲೆಯ ಅಭಿವೃದ್ಧಿಗೆ ತೊಂದರೆ ಉಂಟುಮಾಡುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಯಿತು.
ಬಿಜೆಪಿ ಶಾಸಕರು, “ಪ್ರಚೋದನಾತ್ಮಕ ಭಾಷಣಗಳಿಂದ ಕೋಮು ಸಂಘರ್ಷ ಅಥವಾ ಕೊಲೆ ಸಂಭವಿಸುತ್ತಿದೆ ಎಂಬುದು ನಂಬಲಸಾಧ್ಯ. ಆದರೆ ಗೋಹತ್ಯೆ, ಡ್ರಗ್ಸ್, ಮರಳು ಮಾಫಿಯಾ ನಿಯಂತ್ರಣಗೊಂಡರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ,” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ. ಖಾದರ್, ಐಜಿ, ಜಿಲ್ಲಾಧಿಕಾರಿ, ಪೋಲಿಸ್ ಅಧಿಕಾರಿಗಳು, ಶಾಸಕರು, ಸಂಸದರು, ಮಾಜಿ ಸಚಿವರು, ವಿವಿಧ ಪಕ್ಷಗಳ ಹಾಗೂ ಧಾರ್ಮಿಕ ಮುಖಂಡರು ಸೇರಿದಂತೆ ಹಲವಾರು ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.