Bengaluru: ನ್ಯಾ. ಮೈಕೆಲ್ ಡಿ. ಕುನ್ಹಾ ಅವರ ವರದಿ (Justice Cunha report) ಎಷ್ಟು ಸತ್ಯ ಮತ್ತು ಯಾವ ಅರ್ಥದಲ್ಲಿ ಪೊಲೀಸ್ ಇಲಾಖೆ ತಪ್ಪು ಮಾಡಿದೆ ಎಂಬುದು ಇನ್ನೂ ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G. Parameshwar) ಹೇಳಿದ್ದಾರೆ.
ಅವರು ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಕಾಲ್ತುಳಿತ ಸಂಬಂಧಿ ವರದಿಯನ್ನು ನಾನು ಇನ್ನೂ ನೋಡಿಲ್ಲ. ವರದಿ ಸಿಎಂಗೆ ನೀಡಲಾಗಿದೆ, ನಮಗೆ ಇನ್ನೂ ಸಿಕ್ಕಿಲ್ಲ. ಪೊಲೀಸ್ ಇಲಾಖೆ ತಪ್ಪು ಅಂತಾ ಹೇಳಲಾಗಿದೆ ಅಂತ ಕೇಳಿದ್ದೇನೆ. ಆದರೆ ನಿಜವಾಗಿ ಎಷ್ಟು ಸರಿ, ಏನು ಅರ್ಥದಲ್ಲಿ ನ್ಯಾಯಮೂರ್ತಿ ಕುನ್ಹಾ ಅವರು ಮಾತನಾಡಿದ್ದಾರೆ ಎಂಬುದು ವರದಿ ಓದಿದ ಮೇಲೆ ಮಾತ್ರ ಗೊತ್ತಾಗುತ್ತದೆ,” ಎಂದರು.
ಅದೇ ಸಂದರ್ಭದಲ್ಲಿ, ಸುರ್ಜೇವಾಲಾ ಭೇಟಿ ಬಗ್ಗೆ ಮಾತನಾಡಿದ ಅವರು, “ನಾನು ಕೂಡ ಅವರನ್ನು ಭೇಟಿಯಾಗಲು ಯೋಜಿಸಿದ್ದೇನೆ, ಆದರೆ ಹಿಂದಿನ ಬಾರಿ ಸಾಧ್ಯವಾಗಲಿಲ್ಲ. ಕೆಲವು ಮಂತ್ರಿಗಳೊಂದಿಗೆ ಅವರು ಚರ್ಚೆ ನಡೆಸುತ್ತಿದ್ದಾರೆ. ಶಾಸಕರೊಂದಿಗೆ ಅವರು ಈಗಾಗಲೇ ಚರ್ಚೆ ಮಾಡಿಕೊಂಡಿದ್ದಾರೆ. ಇದಕ್ಕೆ ಹಿಂದೆಯೆಲ್ಲಾ ಏನು ಉದ್ದೇಶವಿದೆಯೋ ಗೊತ್ತಿಲ್ಲ. ಸಚಿವರ ಮೌಲ್ಯಮಾಪನ ನಡೆಯುತ್ತಿದೆ ಎಂಬ ವಿಷಯವೂ ನನಗೆ ತಿಳಿದಿಲ್ಲ. ನಮಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಹಾಗಿದ್ದರೆ ನಮ್ಮಿಂದ ಇಲಾಖೆ ಕುರಿತ ಪ್ರಗತಿ ವರದಿ ಕೇಳುತ್ತಿದ್ದರು,” ಎಂದು ಸ್ಪಷ್ಟಪಡಿಸಿದರು.
ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮ ಕುರಿತು ಗೃಹ ಸಚಿವರು ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಕೇಂದ್ರ ಸರ್ಕಾರ ಶಿಷ್ಟಾಚಾರವನ್ನು ಪಾಲಿಸಿಲ್ಲ. ಮುಖ್ಯಮಂತ್ರಿ ಅವರಿಗೆ ಕೇಂದ್ರ ಸಚಿವ ಗಡ್ಕರಿ ಆಹ್ವಾನ ನೀಡಿಲ್ಲ. ಇದು ಸರಿಯಲ್ಲ. ಎರಡು ದಿನ ಮುಂದೂಡಿ ಎಂದರೂ ಸಹ ಕೇಳಿಕೊಳ್ಳಲಿಲ್ಲ. ಗಡ್ಕರಿ ಒಳ್ಳೆಯ ಸಚಿವ ಎಂದು ನನಗೆ ಗೊತ್ತು. ಆದರೆ ಶಿಷ್ಟಾಚಾರ ಪಾಲಿಸಲೇಬೇಕಿತ್ತು. ಯಾವುದೇ ಯೋಜನೆ ಆದರೂ ರಾಜ್ಯದ ವಿಶ್ವಾಸ ಮುಂಚಿತವಾಗಿಯೇ ತಗೊಳ್ಳಬೇಕು,” ಎಂದರು.
ಇನ್ನೊಂದು ಅಂಶದಲ್ಲಿ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರ ಹೆಗ್ಗಡೆ ಅವರು ಗೃಹ ಸಚಿವರನ್ನು ಭೇಟಿಯಾದರು. ಧರ್ಮಸ್ಥಳದಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳನ್ನು ಹೂತಿದ್ದಾರೆ ಎಂಬ ಗಂಭೀರ ಆರೋಪವೊಂದು ವ್ಯಕ್ತಿಯಿಂದ ಪೊಲೀಸರು ಪಡೆದಿದ್ದಾರೆ. ಈ ಹಿನ್ನೆಲೆ ಈ ಭೇಟಿಗೆ ರಾಜಕೀಯ ಹಾಗೂ ಸಾರ್ವಜನಿಕ ಮಟ್ಟದಲ್ಲಿ ಭಾರೀ ಕುತೂಹಲ ಉಂಟಾಗಿದೆ.