Bagalkot: ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠಕ್ಕೆ (Panchamasali Peetha) ಹಾಕಲಾಗಿದ್ದ ಬೀಗವನ್ನು ನಿನ್ನೆ ತೆರೆಯಲಾಗಿದೆ. ಈ ಬೀಗ ವಿಚಾರ ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್ ಮತ್ತು ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನಡುವಿನ ಗೊಂದಲಕ್ಕೆ ಕಾರಣವಾಗಿತ್ತು.
ನಾಲ್ಕು ದಿನಗಳಿಂದ ಪೀಠ ಬಾಗಿಲಿಗೆ ಬೀಗ ಹಾಕಲಾಗಿತ್ತು. ವಿಚಾರ ಗಂಭೀರವಾಗುತ್ತಿದ್ದಂತೆ, ಪಂಚಮಸಾಲಿ ಸಮುದಾಯದ ಮುಖಂಡರು ಕಾಶಪ್ಪನವರ್ ಜೊತೆ ಸಭೆ ನಡೆಸಿ ಬೀಗ ತೆಗೆಯಲು ನಿರ್ಧರಿಸಿದರು. ಬಳಿಕ ಪೀಠದಲ್ಲಿ ಕಾಶಪ್ಪನವರ್ ಹಾಗೂ ಸ್ವಾಮೀಜಿಗಳ ಬೆಂಬಲಿಗರಿಂದ ಸಭೆ ನಡೆದಿದ್ದು, ಸಿಸಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ. ಅಲ್ಲದೇ ಹಿಂದಿನ ವಿವಾದದ ಕಾರಣ ಸ್ಥಗಿತಗೊಂಡಿದ್ದ ಪೀಠದಲ್ಲಿನ ಕನ್ನಡ ಶಾಲೆಯು ಪುನಾರಂಭವಾಗಿದೆ.
ಮಂಗಳವಾರ, ಹುನಗುಂದದಲ್ಲಿ ಪಂಚಮಸಾಲಿ ಮುಖಂಡರ ಸಭೆಯಾದ ನಂತರ, ಸ್ವಾಮೀಜಿಗಳು ಕೂಡಲಸಂಗಮ ಪೀಠಕ್ಕೆ ಭೇಟಿ ನೀಡಿದರು. ಈ ಹಿನ್ನೆಲೆ ಸ್ವಾಮೀಜಿ ಮತ್ತು ಪೀಠದ ಸುತ್ತಮುತ್ತ ಭದ್ರತೆಯಾಗಿ ಪೊಲೀಸ್ ನಿಯೋಜನೆ ಮಾಡಲಾಗಿದೆ.
ಭಾನುವಾರ ಬೀಗ ತೆಗೆಯುವ ಯತ್ನ ನಡೆದಿದ್ದು, ಈ ಬಗ್ಗೆ ಕಾಶಪ್ಪನವರ್ ಬೆಂಬಲಿಗರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಐವರು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ವಾಮೀಜಿಗಳು, “ನನಗೆ ಯಾವುದೇ ಮಾಹಿತಿ ಇಲ್ಲ” ಎಂದಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ, “ನಾನು ಇತ್ತೀಚೆಗೆ ಮೀಸಲಾತಿ ಹೋರಾಟದ ಕುರಿತು ಜಿಲ್ಲೆ ಜಿಲ್ಲೆ ಪ್ರವಾಸ ಮಾಡುತ್ತಿದ್ದೆ. ಈ ಕಾರಣ ಪೀಠದ ಕಡೆ ಹೋಗಲು ಸಾಧ್ಯವಾಗಲಿಲ್ಲ. ಬೀಗ ಯಾರಿಂದ ಹಾಕಲಾಗಿದೆ ಎನ್ನುವುದು ನನಗೂ ಗೊತ್ತಿಲ್ಲ. ಈಗ ಪೀಠಕ್ಕೆ ಹೋದ ಮೇಲೆ ನಿಜವಾದ ಸ್ಥಿತಿ ತಿಳಿಯಲಿದೆ” ಎಂದು ಹೇಳಿದ್ದಾರೆ.