Islamabad: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಜೈಲಿನಿಂದ ಪಾಕ್ ಸೇನೆಯ ಮುಖ್ಯಸ್ಥ ಅಸಿಮ್ ಮುನೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನನಗೆ ಜೈಲಿನಲ್ಲಿ ಏನಾದರೂ ತೊಂದರೆ ಆಯಿತೆಂದರೆ ಅದಕ್ಕೆ ಒಬ್ಬನೇ ಕಾರಣ ಅಸಿಮ್ ಮುನೀರ್” ಎಂದು ಅವರು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಹೇಳುವಂತೆ, ಅವರು ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ಜೈಲಿನಲ್ಲಿ ಅಮಾನವೀಯ ರೀತಿಯಲ್ಲಿ ವರ್ತಿಸಲಾಗುತ್ತಿದೆ. “ನಮ್ಮ ಸೆಲ್ನ ಟಿವಿಯನ್ನೂ ಆಫ್ ಮಾಡಿದ್ದಾರೆ. ಮಾನವೀಯ ಮತ್ತು ಕಾನೂನು ಹಕ್ಕುಗಳನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಅಸಿಮ್ ಮುನೀರ್ ಆದೇಶದ ಮೇರೆಗೆ ಜೈಲು ಅಧಿಕಾರಿ ಮತ್ತು ಸೇನೆಯ ಕರ್ನಲ್ ಈ ತೊಂದರೆ ನೀಡುತ್ತಿದ್ದಾರೆ ಎಂದು ಇಮ್ರಾನ್ ಆರೋಪಿಸಿದ್ದಾರೆ.
“ನನಗೆ ಏನಾದರೂ ಆಗಿದ್ರೆ, ಅಸಿಮ್ ಮುನೀರ್ ಅವರೇ ಹೊಣೆಗಾರರು ಎಂಬುದು ನನ್ನ ಪಕ್ಷದ ಎಲ್ಲ ಸದಸ್ಯರಿಗೆ ಸ್ಪಷ್ಟವಾಗಿರಲಿ” ಎಂದೂ ಅವರು ಹೇಳಿದ್ದಾರೆ. “ನಾನು ಜೈಲಿನಲ್ಲಿ ಜೀವನ ಕಳೆಯಲು ಸಿದ್ಧನಿದ್ದೇನೆ, ಆದರೆ ಯಾವಾಗಲೂ ದಬ್ಬಾಳಿಕೆಗೆ ಮಣಿಯೋದಿಲ್ಲ” ಎಂಬ ಆತ್ಮವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.







