Deir al-Balah: ಗಾಜಾ ಪಟ್ಟಣದಲ್ಲಿ ಭಾನುವಾರ ನಡೆದ ಇಸ್ರೇಲ್ ದಾಳಿಯಲ್ಲಿ, ಆಹಾರಕ್ಕಾಗಿ ಸೇರಿದ್ದ ಜನರ ಮೇಲೆ ಗುಂಡು ಹಾರಿಸಿ 85 ಪ್ಯಾಲೆಸ್ತೀನಿಯರನ್ನು (Palestinians) ಕೊಂದಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಹೇಳಿದೆ.
ಉತ್ತರ ಗಾಜಾದಲ್ಲಿ ಪರಿಸ್ಥಿತಿ ತುಂಬಾ ಭೀಕರವಾಗಿದೆ. ಗಾಜಾದ ಜನರು ಆಹಾರ ಪಡೆಯಲು ಸಾಲಿನಲ್ಲಿ ನಿಂತಾಗ, ಇಸ್ರೇಲಿ ಸೇನೆ ಗುಂಡು ಹಾರಿಸಿ ಅವರನ್ನು ಹೊಡೆದಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಘಟನೆಯ ಫೋಟೋಗಳಲ್ಲಿ, ಜನರು ಗುಂಡಿನ ಶಬ್ದ ಕೇಳುತ್ತಿದ್ದಂತೆ ಓಡುತ್ತಿರುವ ದೃಶ್ಯಗಳು ಕಣ್ಣು ತುಂಬಿಸುವಂತಿವೆ.
ಘಟನೆಯನ್ನು ಕಣ್ಣಾರೆ ಕಂಡ ಇಹಾಬ್ ಅಲ್-ಝೀ ಎಂಬ ವ್ಯಕ್ತಿ ಹೇಳುವಂತೆ, “ಅದು ಕ್ಷಣಾರ್ಧದಲ್ಲಿ ನಡೆಯಿತು. ಟ್ಯಾಂಕುಗಳು ಬಂದು ನಮ್ಮನ್ನು ಸುತ್ತುವರೆದು ಗುಂಡು ಹಾರಿಸತೊಡಗಿದವು. ನಾವು ಅಲ್ಲೇ ಸಿಕ್ಕಿಹಾಕಿಕೊಂಡೆವು. ಸುಮಾರು 2 ಗಂಟೆಗಳ ಕಾಲ ಗುಂಡಿನ ದಾಳಿ ನಡೆಯಿತು. ಹಸಿವಿನಿಂದ ಸಾಯುವುದೇ ಇಂತಹ ದಾಳಿಯಿಗಿಂತ ಚೆನ್ನಾಗಿದೆ” ಎಂದು ಹೇಳಿದರು.
ಇಸ್ರೇಲ್‌ನ ದಾಳಿಯಲ್ಲಿ ಗಾಜಾದಲ್ಲಿ ಈಗಾಗಲೇ 59,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ತುರ್ತು ಸೇವೆಗಳು ಮತ್ತು ಆಸ್ಪತ್ರೆಗಳು ತುಂಬಿಬಿಟ್ಟಿವೆ. ವೈದ್ಯರು ಔಷಧ ಕೊರತೆ ಮತ್ತು ಅಪೌಷ್ಟಿಕತೆಯ ಬಗ್ಗೆ ಅಲರ್ಟ್ ನೀಡುತ್ತಿದ್ದಾರೆ.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ಗೆ ನುಗ್ಗಿ 1,200 ಜನರನ್ನು ಕೊಂದು, 251 ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದರು. ಈ ಘಟನೆಯ ನಂತರ ಇಸ್ರೇಲ್ ಆರಂಭಿಸಿದ ಸೇನಾ ದಾಳಿಯಲ್ಲಿ ಅನೇಕ ಪ್ಯಾಲೆಸ್ತೀನಿಯರು ಜೀವಹಾನಿಗೆ ಒಳಗಾಗುತ್ತಿದ್ದಾರೆ. ಮೃತರಲ್ಲಿ ಹೆಚ್ಚುಮಂದಿ ಮಹಿಳೆಯರು ಮತ್ತು ಮಕ್ಕಳು.