Bengaluru: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ (Chinnaswamy Stadium stampede) 11 ಜನ ಮೃತಪಟ್ಟ ಘಟನೆ ಸಂಬಂಧ ನ್ಯಾ. ಮೈಕೆಲ್ ಕುನ್ಹಾ ಸಲ್ಲಿಸಿದ ವರದಿಯನ್ನು ರದ್ದುಗೊಳಿಸಬೇಕು ಎಂದು ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ.
ಈ ಅರ್ಜಿ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಎಸ್.ಜಿ. ಪಂಡಿತ್ ಅವರಿದ್ದ ಪೀಠದ ಮುಂದೆ ದಾಖಲಾಗಿದೆ. ಸರ್ಕಾರ ಈ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿದ ಬೆನ್ನಲ್ಲೇ ಡಿಎನ್ಎ ಹೈಕೋರ್ಟ್ ದ್ವಾರ ಬಡಿದಿದೆ. ಅರ್ಜಿಯ ವಿಚಾರಣೆ ಜುಲೈ 28ಕ್ಕೆ ನಿಗದಿಯಾಗಿದೆ.
ಡಿಎನ್ಎ ತನ್ನ ಅರ್ಜಿಯಲ್ಲಿ, ಸರ್ಕಾರ ತನ್ನ ತಪ್ಪು ಮುಚ್ಚಿಸಲು ಕುನ್ಹಾ ಆಯೋಗ ರಚಿಸಿದ್ದು, ವರದಿ ಸಂಪೂರ್ಣ ಏಕಪಕ್ಷೀಯವಾಗಿದೆ ಎಂದು ಆರೋಪಿಸಿದೆ. ಸಾಕ್ಷಿಗಳಿಗೆ ಸಮರ್ಪಕ ಅವಕಾಶ ನೀಡಲಾಗಿಲ್ಲ. ವರದಿ ಲೀಕ್ ಆಗಿದ್ದು, ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗುವಂತಾಗಿದೆ. ಆದ್ದರಿಂದ ವರದಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಘಟನೆಯ ತನಿಖೆಗೆ ಸಂಬಂಧಿಸಿದಂತೆ ಸರ್ಕಾರ ಇತ್ತೀಚೆಗೆ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು. ಪೊಲೀಸರ ವಿರುದ್ಧ ಇಲಾಖಾ ತನಿಖೆ ನಡೆಸಲು, ಡಿಎನ್ಎ ಎಂಟರ್ಟೇನ್ಮೆಂಟ್, RCB ತಂಡ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸಂಪುಟ ನಿರ್ಧರಿಸಿತ್ತು.
ಈ ನಿರ್ಧಾರದ ಪರಿಣಾಮವಾಗಿ, ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ. ಶಂಕರ್, ಖಜಾಂಚಿ ಜಯರಾಮ್, RCB ರಾಜೇಶ್ ಮೆನನ್, ಡಿಎನ್ಎ ಎಂಡಿ ವೆಂಕಟ್ ವರ್ಧನ್ ಹಾಗೂ ಉಪಾಧ್ಯಕ್ಷ ಸುನೀಲ್ ಮಾಥೂರ್ ಮುಂತಾದವರಿಗೆ ಸಂಕಷ್ಟ ಎದುರಾಗಿದೆ.
ಹೈಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದ್ದು, ತೀರ್ಪು ಯಾರ ಪರ ಬರಲಿದೆ ಎಂಬುದನ್ನು ಜುಲೈ 28ರಂದು ನಿರ್ಧರಿಸಲಾಗುತ್ತದೆ.