Mandya: ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ‘ಕೋಮಾ’ ಸ್ಥಿತಿಯಲ್ಲಿದೆ. ಇಂತಹ ಸರ್ಕಾರವನ್ನು ಉರುಳಿಸಲು “ಆಪರೇಶನ್ ಕಮಲ” ಮಾಡುವ ಅಗತ್ಯವಿಲ್ಲ. ಅಕ್ಟೋಬರ್ ವೇಳೆಗೆ ತಾನಾಗಿಯೇ ಪತನವಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashok) ಭವಿಷ್ಯವಾಣಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಯಾರನ್ನೂ ಪಕ್ಷಾಂತರ ಮಾಡಿಸುವುದಿಲ್ಲ. ಮಹಾರಾಷ್ಟ್ರದಲ್ಲಿ ನಡೆದಂತ ರಾಜಕೀಯ ತಂತ್ರವನ್ನು ಇಲ್ಲಿಲ್ಲಾ ಬಳಸುವುದೂ ಇಲ್ಲ. ಜನರೇ ಈ ಸರ್ಕಾರವನ್ನು ನಿರಾಕರಿಸಿದ್ದಾರೆ. ನಾವು ವೈದ್ಯರು ಅಲ್ಲ, ಸರ್ಕಾರ ಸತ್ತೊಡನೆ ಮಾತ್ರ ಪ್ರವೇಶಿಸುತ್ತೇವೆ” ಎಂದು ವ್ಯಂಗ್ಯವಾಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ “ಅಶೋಕ್ ಹತ್ತಿರ ಜ್ಯೋತಿಷ್ಯ ಕೇಳ್ತೀನಿ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, “ಅವರು ಇನ್ನೂ ನನ್ನ ಬಳಿ ಬಂದಿಲ್ಲ. ನಾನು ಹೇಳಿದ್ದು ಸುಳ್ಳಾಗಿದ್ದರೆ ಸುರ್ಜೇವಾಲಾ ಯಾಕೆ ಪದೇಪದೇ ಕರ್ನಾಟಕಕ್ಕೆ ಬರುತ್ತಾರೆ? ಸಿದ್ದರಾಮಯ್ಯ ಮತ್ತು ಡಿಕೆಶಿ ಯಾಕೆ ದೆಹಲಿಗೆ ಹೋಗುತ್ತಾರೆ? ಇದರರ್ಥ, ನಾನು ಹೇಳಿದ್ದು ಸತ್ಯ” ಎಂದು ಹೇಳಿದರು.
ಅವರು ಮುಂದುವರಿದು, “ಅಕ್ಟೋಬರ್ನಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಆಗಬಹುದು. ಅದರಲ್ಲಿ ಕಾಂಗ್ರೆಸ್ ಶಾಸಕರೇ ಒಪ್ಪಂದ ಆಗಿದ್ದರೆ ಸಿಎಂ ಸ್ಥಾನ ಬಿಟ್ಟು ಕೊಡಲಿ ಎನ್ನುತ್ತಿದ್ದಾರೆ. ಅಕ್ಟೋಬರ್ನಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ. ಆ ಬೆಂಕಿಯಲ್ಲಿ ಯಾರು ಸುಟ್ಟು ಹೋಗುವರೋ, ಯಾರು ಆಚೆ ಬರುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಹಠದ ನಾಯಕರು. ಕಾಂಗ್ರೆಸ್ಸಿನಲ್ಲಿ ಉಂಟಾಗುವ ಅಸಮಾಧಾನದಿಂದಲೇ ಸರ್ಕಾರ ಪತನವಾಗುವ ಸಾಧ್ಯತೆ ಇದೆ” ಎಂದರು.