Peshawar, Pakistan: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದನೆಗೆ ವಿರೋಧವಾಗಿ ನಡೆದಿದ್ದ ಪ್ರತಿಭಟನೆಯ ವೇಳೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಮೂವರನ್ನು ಕೊಂದ ಘಟನೆ ಭಾನುವಾರ ನಡೆದಿದೆ. ಈ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಜಖಾ ಖೇಲ್ ಎಂಬಲ್ಲಿನ ಮಾರ್ಟರ್ ದಾಳಿಯಲ್ಲಿ ಬಾಲಕಿಯೊಬ್ಬಳು ಸಾವನ್ನಪ್ಪಿದ ಹಿನ್ನೆಲೆ, ಸ್ಥಳೀಯರು ಶವದೊಂದಿಗೆ ಭಾನುವಾರ ಪ್ರತಿಭಟನೆ ನಡೆಸಿದ್ದರು. ಬಾಲಕಿಯ ಶವವನ್ನು ಮೊಮಂಡ್ ಘುಜ್ ಚೆಕ್‌ಪೋಸ್ಟ್ ಮುಂದೆ ಇಟ್ಟು ಪ್ರತಿಭಟನೆಯಾಗುತ್ತಿದ್ದಾಗ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದರು.
ಖೈಬರ್ ಪಖ್ತುಂಖ್ವಾ ರಾಜ್ಯದ ಮುಖ್ಯಮಂತ್ರಿಯ ವಿಶೇಷ ಸಹಾಯಕ ಸುಹೈಲ್ ಅಫ್ರಿದಿ ಮಾತನಾಡಿ, ದಾಳಿ ನಡೆಸಿದವರು “ಭಯೋತ್ಪಾದಕರು” ಹಾಗೂ “ಫಿತ್ನಾ-ಅಲ್-ಖವಾರಿಜ್” ಸಂಘಟನೆಗೆ ಸೇರಿದವರಾಗಿರಬಹುದು ಎಂದು ಹೇಳಿದರು. ಜಿಲ್ಲಾಧಿಕಾರಿಗಳಿಂದಲೇ ಈ ಮಾಹಿತಿ ಲಭಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ದಾಳಿಯ ಬಳಿಕ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ದಾಳಿಗೆ ಕಾರಣವಾದವರನ್ನು ಗುರುತಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪಾಕಿಸ್ತಾನ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಘೋಷಿಸಲಾಗಿದೆ. ಮೇಜರ್ ಜನರಲ್ ರಾವ್ ಇಮ್ರಾನ್ ಸರ್ತಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.