New Delhi: RBI ನ ಮಾನಿಟರಿ ಪಾಲಿಸಿ ಕಮಿಟಿ (MPC) ಸಭೆ ಆಗಸ್ಟ್ 4ರಂದು ಆರಂಭವಾಗಿದೆ. ಬುಧವಾರ (ಆಗಸ್ಟ್ 6) ಸಭೆಯ ನಿರ್ಧಾರ ಪ್ರಕಟವಾಗಲಿದೆ. ಸತತವಾಗಿ ಮೂರು ಸಭೆಗಳಲ್ಲಿ ಬಡ್ಡಿದರ ಇಳಿಕೆಯಾಗಿರುವುದರಿಂದ, ಈ ಸಲವೂ ರಿಪೋ ದರ ಮತ್ತೆ ಇಳಿಯಬಹುದೆ ಎಂಬ ನಿರೀಕ್ಷೆ ಮೂಡಿದೆ.
ಫೆಬ್ರುವರಿ ಮತ್ತು ಏಪ್ರಿಲ್‌ನಲ್ಲಿ ತಲಾ 25 ಪಾಯಿಂಟ್‌ಗಳಿಂದ ರಿಪೋ ದರ ಇಳಿಸಲಾಗಿತ್ತು. ಜೂನ್‌ನಲ್ಲಿ ಒಮ್ಮೆಗೇ 50 ಪಾಯಿಂಟ್ ಇಳಿಕೆಯಾಗಿತ್ತು. ಇದರಿಂದ ಒಟ್ಟು 100 ಪಾಯಿಂಟ್‌ಗಳಷ್ಟು ಬಡ್ಡಿದರ ಕಡಿಮೆಯಾಗಿದೆಯೆಂದು ಹೇಳಬಹುದು.
ಈ ಬಾರಿ ಎಂಪಿಸಿ ಸಭೆಯಲ್ಲಿ 25 ಪಾಯಿಂಟ್ ರಿಪೋ ದರ ಇಳಿಯಬಹುದು ಎಂಬ ನಿರೀಕ್ಷೆ ಕೆಲ ತಜ್ಞರ ಬಳಿ ಇದೆ. ಆದರೆ ಬಹುತೇಕ ತಜ್ಞರು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗದೆ ಇರಬಹುದು ಎಂಬ ಅಭಿಪ್ರಾಯದಲ್ಲಿದ್ದಾರೆ.
ಭಾರತದ ಆರ್ಥಿಕತೆ ಈಗ ಏರಿಳಿತದ ಸ್ಥಿತಿಯಲ್ಲಿ ಇದೆ. ಒಂದು ಕಡೆ ಹಣದುಬ್ಬರ ಕಡಿಮೆಯಾಗಿದೆ ಮತ್ತು ದೇಶದೊಳಗಿನ ಖರ್ಚು ಹೆಚ್ಚಾಗಿದೆ – ಇದು ಒಳ್ಳೆಯ ದಿಕ್ಕು. ಆದರೆ, ಇತ್ತ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ತೆರಿಗೆ ನೀತಿಗಳು ಭಾರತಕ್ಕೆ ಅನಿಶ್ಚಿತತೆ ತರಬಹುದು.
ಹೀಗಾಗಿ, ಕೆಲವರು RBI ಯಾವುದೇ ಬದಲಾವಣೆ ಮಾಡದಿರಬಹುದು ಎನ್ನುತ್ತಿದ್ದಾರೆ. ಆದರೆ ಇನ್ನೂ ಕೆಲವು ತಜ್ಞರು ಆಂತರಿಕ ಬೇಡಿಕೆ ಹೆಚ್ಚಿದರೆ ಮತ್ತು ಹಣದುಬ್ಬರ ನಿಯಂತ್ರಣದಲ್ಲಿದ್ದರೆ, RBI ಮತ್ತೆ ಬಡ್ಡಿದರ ಇಳಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಎಂಪಿಸಿ ಸಭೆಯಲ್ಲಿ ಕೇವಲ ಬಡ್ಡಿದರವಲ್ಲದೆ, ಹಣದುಬ್ಬರ, ದೇಶದ ಆರ್ಥಿಕ ಬೆಳವಣಿಗೆ (ಜಿಡಿಪಿ), ಜನರ ಖರ್ಚಿನ ಶಕ್ತಿ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಲಿದೆ. ಮುಂದಿನ ನಾಲ್ಕು ತ್ರೈಮಾಸಿಕದ (Quarter) ಹಣದುಬ್ಬರ ಮತ್ತು ಜಿಡಿಪಿ ಕುರಿತು ಅಂದಾಜು ಹಾಕಲಾಗುತ್ತದೆ. ಜನರ ಖರ್ಚನ್ನು ಉತ್ತೇಜಿಸಲು ಅಗತ್ಯವಿದ್ದರೆ ಪಾಲಿಸಿ ಕ್ರಮಗಳಲ್ಲಿ ಬದಲಾವಣೆ ಸಾಧ್ಯ.