Bengaluru: “ನಾನು ಹೊಸ ತಲೆಮಾರಿಗೆ ಸೇರಿದವನು. ಕೆಲಸ ವೇಗವಾಗಿ ಆಗಬೇಕು ಅನ್ನೋದು ನನ್ನ ನಿಲುವು. ಇಂದಿರಾ ಗಾಂಧಿ ಶಂಕುಸ್ಥಾಪನೆ ಮಾಡ್ತಿದ್ದರು, ಸೋನಿಯಾ ಗಾಂಧಿ ಉದ್ಘಾಟನೆ ಮಾಡ್ತಿದ್ದರು ಅನ್ನೋ ಕಾಲ ಕಳೆದಿದ್ದು, ಈಗ ಮೋದಿ ಕಾಲ – ಎಲ್ಲವೂ ವೇಗದಲ್ಲಿ ನಡೆಯುತ್ತೆ,” ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದರು. ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡುತ್ತಾ, “ಕಾಂಗ್ರೆಸ್ ಪಾರ್ಟಿಯವರಿಗೆ ವಿಳಂಬವೇ ಸಾಮಾನ್ಯ. ಈ ಕಾಲದಲ್ಲಿ ವೇಗವೇ ಅಗತ್ಯ” ಎಂದರು.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ, “ಹಳದಿ ಲೈನ್ ಮೆಟ್ರೋ ಯಾಕೆ ಬೇಗ ಮಾಡಿ ಅಂತಾ ಪ್ರಶ್ನಿಸುವವರು, ಈ ಯೋಜನೆಗೆ ತಮ್ಮ ಕೊಡುಗೆ ಏನು? ನಾಲ್ಕು ವರ್ಷ ಎಂ.ಡಿ ಇಲ್ಲದೆ ಬಿಎಂಆರ್ಸಿಎಲ್ ಕಾರ್ಯನಿರ್ವಹಿಸುತ್ತಿತ್ತು. ಅರ್ಧ ಡಜನ್ ಬಾರಿ ಮೆಟ್ರೋ ಉದ್ಘಾಟನೆ ಮುಂದೂಡಲಾಯಿತು,” ಎಂದು ತೀವ್ರ ಟೀಕೆ ಮಾಡಿದ್ದಾರೆ.
“ಬೆಂಗಳೂರು ಮೆಟ್ರೋ ಟಿಕೆಟ್ ದರ ದೇಶದಲ್ಲಿ ಅತಿ ಹೆಚ್ಚು. ಟಿಕೆಟ್ ದರವನ್ನು 130% ಹೆಚ್ಚಿಸಿದರೆ, ಸಾಮಾನ್ಯ ಜನರ ಮೇಲೆ ಪರಿಣಾಮ ಏನು? ರಾಜ್ಯ ಸರ್ಕಾರ ಭಾಗವಹಿಸಬೇಕಾದ ಕೆಲಸವನ್ನೇ ಮಾಡುತ್ತಿಲ್ಲ,” ಎಂದು ತೇಜಸ್ವಿ ಕಿಡಿಕಾರಿದ್ದಾರೆ.
ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ ತೇಜಸ್ವಿ, “ರಾಹುಲ್ ಗಾಂಧಿಗೆ ಕೋರ್ಟ್ ಅವರ ಪರವಾಗಿ ಆದೇಶ ಮಾಡಿದರೆ ಅದು ಸರಿ, ವಿರೋಧದಲ್ಲಿ ಆದರೆ ಕೋರ್ಟ್ ತಪ್ಪು ಅನ್ನೋ ಮನೋಭಾವ. ಮೋದಿ ಅವರ ಯಶಸ್ಸನ್ನು ಸಹಿಸಲು ಅವರಿಗೆ ಆಗುತ್ತಿಲ್ಲ. ಅಧಿಕಾರ ಕಳೆದುಕೊಂಡದ್ದು ಅವರನ್ನು ಮಾನಸಿಕವಾಗಿ ದೊಬ್ಬಿಸಿದೆ” ಎಂದು ವ್ಯಂಗ್ಯವಾಡಿದರು.
ಇನ್ನು ಹೀಗಾಗಿ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನಾಯಕರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದು, ವೇಗದ ಆಡಳಿತವೇ ಈ ಕಾಲದ ಅಗತ್ಯ ಎನ್ನುವುದನ್ನು ಪುನರುಚ್ಛರಿಸಿದ್ದಾರೆ.