ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿ ಹೊರವಲಯದಲ್ಲಿ, ಮುತ್ಯಲಮ್ಮ ದೇವಸ್ಥಾನದಿಂದ ಸುಮಾರು 3 ಕಿ.ಮೀ ವ್ಯಾಪ್ತಿಯೊಂದೇ ರಸ್ತೆಯಲ್ಲಿ ಮಾನವ ದೇಹದ ಹಲವು ಭಾಗಗಳು ಪತ್ತೆಯಾಗಿವೆ.
ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ, ರೈತನೊಬ್ಬ ಹೊಲಕ್ಕೆ ಹೋಗುವಾಗ ಕಪ್ಪು ಕವರ್‌ನೊಳಗೆ ಕೈ ತುಂಡು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ತಪಾಸಣೆ ನಡೆಸಿ, ಅದೇ ರಸ್ತೆಯಲ್ಲಿ ಇನ್ನೊಂದು ಕೈ, ಹೊಟ್ಟೆಯ ಭಾಗ ಮತ್ತು ಕರುಳುಗಳನ್ನು ಪತ್ತೆಹಚ್ಚಿದರು.
ಎಲ್ಲ ಅಂಗಾಂಗಗಳನ್ನು ಹಳದಿ ಮತ್ತು ಕಪ್ಪು ಕವರ್‌ಗಳಲ್ಲಿ ಹಾಕಿ ಒಂದೇ ದಿಕ್ಕಿನಲ್ಲಿ ರಸ್ತೆಯ ಬದಿಗೆ ಎಸೆಯಲಾಗಿತ್ತು.
ಮೃತದೇಹದ ತಲೆ ಮತ್ತು ಕಾಲುಗಳು ಇನ್ನೂ ಪತ್ತೆಯಾಗಿಲ್ಲ. ಪ್ರಾಥಮಿಕವಾಗಿ, ಕೈ ಮೇಲೆ ಕಂಡ ಟ್ಯಾಟುವಿನಿಂದ ಇದು ಮಹಿಳೆಯ ದೇಹವಾಗಿರಬಹುದೆಂದು ಶಂಕಿಸಲಾಗಿದೆ.
ಪತ್ತೆಯಾದ ಭಾಗಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಕೊರಟಗೆರೆ ಮತ್ತು ಕೊಳಾಲ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಮುಂದುವರಿದಿದೆ. ಸ್ಥಳೀಯವಾಗಿ ಕಾಣೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ತುಮಕೂರು ಎಸ್ಪಿ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಿಧ ಅಂಗಾಂಗಗಳ ಪತ್ತೆಯಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ.








