ಆಪರೇಷನ್ ಸಿಂದೂರ ನಂತರ, ಏಪ್ರಿಲ್ 24ರಿಂದ ಜೂನ್ 30ರವರೆಗೆ ಪಾಕಿಸ್ತಾನವು (Pakistan) ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶ ಪ್ರವೇಶ ನಿಷೇಧಿಸಿತು. ಇದರಿಂದ ಪಾಕಿಸ್ತಾನಕ್ಕೆ ಸುಮಾರು 123 ಕೋಟಿ ರೂ ಆದಾಯ ನಷ್ಟವಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ, ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಭಾರತದಲ್ಲಿ ನೋಂದಾಯಿತ ಎಲ್ಲಾ ವಿಮಾನಗಳಿಗೂ ಪಾಕಿಸ್ತಾನ ಪ್ರವೇಶ ನಿರಾಕರಿಸಿತು. ದಿನಕ್ಕೆ 100-150 ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದಿಂದ ಹಾದು ಹೋಗುತ್ತಿದ್ದವು. ಪಾಕಿಸ್ತಾನದ ಏರ್ ಟ್ರಾಫಿಕ್‌ನಲ್ಲಿ 20% ಹಂಚಿಕೆ ಭಾರತೀಯ ವಿಮಾನಗಳದ್ದೇ ಆಗಿತ್ತು.
2019ರಲ್ಲೂ ಇದೇ ರೀತಿಯ ನಿರ್ಬಂಧದಿಂದ ಪಾಕಿಸ್ತಾನಕ್ಕೆ 228 ಕೋಟಿ ರೂ ನಷ್ಟವಾಗಿತ್ತು. ಈ ಬಾರಿ ಕೂಡ ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ. ಭಾರತೀಯ ವಿಮಾನ ಕಂಪನಿಗಳಿಗೂ ಬೇರೆ ಮಾರ್ಗಗಳನ್ನು ಬಳಸುವುದರಿಂದ ಹೆಚ್ಚುವರಿ ವೆಚ್ಚವಾಗಿದೆ, ಆದರೆ ಆ ಮೊತ್ತ ಇನ್ನೂ ಸ್ಪಷ್ಟವಾಗಿಲ್ಲ.
ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ಪಾಕ್ ಬೆಂಬಲಿತ ಉಗ್ರ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತು. ಪಾಕಿಸ್ತಾನವು ಭಾರತದ ಸೈನ್ಯ ಹಾಗೂ ನಾಗರಿಕ ಆಸ್ತಿಗಳ ಮೇಲೆ ದಾಳಿ ಮಾಡಿದರೂ, ಭಾರತವೂ ಪಾಕಿಸ್ತಾನದ 9 ವಾಯುನೆಲೆಗಳನ್ನು ಗುರಿಯಾಗಿಸಿ ಭಾರೀ ಹಾನಿ ಉಂಟುಮಾಡಿತು.
ದಾಳಿಯಿಂದ ತತ್ತರಿಸಿದ ಪಾಕಿಸ್ತಾನವು ಅಮೇರಿಕ ಅಧ್ಯಕ್ಷ ಟ್ರಂಪ್ ಸಲಹೆಯ ಮೇರೆಗೆ ಭಾರತಕ್ಕೆ ಕದನವಿರಾಮಕ್ಕೆ ಮನವಿ ಮಾಡಿತು. ಹೀಗಾಗಿ ಪಾಕಿಸ್ತಾನ ಮತ್ತಷ್ಟು ಹಾನಿಯಿಂದ ತಪ್ಪಿಸಿಕೊಂಡಿತು.