Jerusalem: ಗಾಜಾದಲ್ಲಿ (Gaza) ಇಸ್ರೇಲ್ ದಾಳಿಯಿಂದ ಆಹಾರ ಕೊರತೆ ತೀವ್ರವಾಗಿದೆ. ಅಪೌಷ್ಟಿಕತೆಯಿಂದ ಈಗಾಗಲೇ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. 22 ತಿಂಗಳ ಯುದ್ಧದಲ್ಲಿ ಸಾವಿರಾರು ಪ್ಯಾಲೆಸ್ಟೈನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli PM Netanyahu) ಗಾಜಾದ ಮೇಲಿನ ಮಿಲಿಟರಿ ದಾಳಿಯನ್ನು ಸಮರ್ಥಿಸಿಕೊಂಡು, ಹಮಾಸ್ ಉಗ್ರರು ಶಸ್ತ್ರತ್ಯಾಗ ಮಾಡುವುದು ಮಾತ್ರವೇ ಪರಿಹಾರ ಎಂದು ಹೇಳಿದ್ದಾರೆ. ಶನಿವಾರ ಮಾತ್ರವೇ ಇಬ್ಬರು ಮಕ್ಕಳು ಹಸಿವಿನಿಂದ ಸಾವಿಗೀಡಾದರು.
ಕಳೆದ ವಾರ ಇಸ್ರೇಲ್ ಭದ್ರತಾ ಸಚಿವ ಸಂಪುಟ ಗಾಜಾ ನಗರ, ಆಶ್ರಯ ಶಿಬಿರಗಳು ಮತ್ತು ಹಮಾಸ್ ಭದ್ರಕೋಟೆಗಳ ಮೇಲೆ ದಾಳಿಗೆ ಅನುಮತಿ ನೀಡಿತು. ಭಾನುವಾರ ರಾತ್ರಿ ನಡೆದ ಬಾಂಬ್ ದಾಳಿಯಲ್ಲಿ ಅಲ್-ಜಜೀರಾ ವರದಿಗಾರ ಅನಾಸ್ ಅಲ್-ಶರೀಫ್, ಮೂವರು ಪತ್ರಕರ್ತರು ಮತ್ತು ಚಾಲಕ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆ, ಅಲ್-ಶರೀಫ್ ಹಮಾಸ್ ಉಗ್ರರ ಜೊತೆಗೂಡಿದ್ದರು ಎಂದು ಆರೋಪಿಸಿದೆ.
ನೆತನ್ಯಾಹು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೊಸ ದಾಳಿಯ ಬಗ್ಗೆ ಮಾಹಿತಿ ನೀಡಿದ್ದು, ಅಮೆರಿಕದ ಬೆಂಬಲಕ್ಕೆ ಧನ್ಯವಾದ ಹೇಳಿದರು. ಗಾಜಾವನ್ನು ಉಗ್ರರಿಂದ ಮುಕ್ತಗೊಳಿಸುವುದೇ ಗುರಿ, ಆಕ್ರಮಿಸಿಕೊಳ್ಳುವುದು ಅಲ್ಲ ಎಂದು ಸ್ಪಷ್ಟಪಡಿಸಿದರು. ಗಾಜಾದಲ್ಲಿ ಹಸಿವು ತೀವ್ರವಾಗಿದೆ ಎಂಬ ಆರೋಪವನ್ನು ಅವರು ಸುಳ್ಳು ಎಂದು ತಳ್ಳಿಹಾಕಿದ್ದಾರೆ.