
ಲಡಾಖ್‌ನ ಏಪ್ರಿಕಾಟ್ (Ladakh Apricots) ಹಣ್ಣು ತನ್ನ ಸಿಹಿ ರುಚಿ, ಸುಗಂಧ ಮತ್ತು ಸಾವಯವ ಗುಣಮಟ್ಟಕ್ಕೆ ಪ್ರಸಿದ್ಧ. 2022ರಲ್ಲಿ “ರಾಕ್ಟ್ಸೆ ಕಾರ್ಪೋ” ಎಂಬ ಪ್ರಭೇದಕ್ಕೆ ಜಿಐ ಟ್ಯಾಗ್ ದೊರೆತಿದೆ. ಇದೀಗ ಲಡಾಖ್‌ನ ಏಪ್ರಿಕಾಟ್ಗಳು ಸೌದಿ ಅರೇಬಿಯಾ, ಕುವೈತ್ ಮತ್ತು ಕತಾರ್ ದೇಶಗಳಿಗೆ ರಫ್ತು ಆಗಲಾರಂಭಿಸಿವೆ. ಮೊದಲ ಹಂತದಲ್ಲಿ 1.5 ಮೆಟ್ರಿಕ್ ಟನ್ ಹಾಲ್ಮನ್ ಏಪ್ರಿಕಾಟ್ ಹಣ್ಣುಗಳನ್ನು ವಿದೇಶಕ್ಕೆ ಕಳುಹಿಸಲಾಗಿದೆ.
ಈ ಯೋಜನೆಗೆ ಲಡಾಖ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಸಹಕರಿಸುತ್ತಿವೆ. ಸ್ಥಳೀಯ ರೈತರಿಂದ ನೇರವಾಗಿ ಸಂಗ್ರಹಿಸಿದ ಹಣ್ಣುಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಪ್ಯಾಕ್ ಮಾಡಿ ಕಳುಹಿಸಲಾಗುತ್ತಿದೆ.
ಲುಲು ಗ್ರೂಪ್ ಇಂಡಿಯಾದ ಸಹಭಾಗಿತ್ವದಲ್ಲಿ ಗಲ್ಫ್ ದೇಶಗಳ ಲುಲು ಹೈಪರ್ ಮಾರುಕಟ್ಟೆಗಳಲ್ಲಿ ಈ ಹಣ್ಣು ಮಾರಾಟವಾಗಲಿದೆ. ಭವಿಷ್ಯದಲ್ಲಿ ಇನ್ನಷ್ಟು ದೇಶಗಳಿಗೆ ರಫ್ತು ಮಾಡುವ ಯೋಜನೆಯೂ ಇದೆ.
ಲಡಾಖ್ ಏಪ್ರಿಕಾಟ್ ಗಳಿಗೆ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆ ಎರಡರಲ್ಲೂ ಬೇಡಿಕೆ ಇದೆ. ಇದು ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಭಾರತವನ್ನು ಜಾಗತಿಕ ತೋಟಗಾರಿಕೆ ವ್ಯಾಪಾರದಲ್ಲಿ ಇನ್ನಷ್ಟು ಪ್ರಸಿದ್ಧಿ ಪಡಿಸುತ್ತದೆ.