Bengaluru: ಬೆಂಗಳೂರಿನ ಮಹಾನಗರ ಪಾಲಿಕೆ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರ (TDR scam) ಹಗರಣ ಸಂಬಂಧ ದಲ್ಲಾಳಿಗಳು ಮತ್ತು ನಕಲಿ ಮಾಲೀಕರಿಗೆ ಸೇರಿದ ಸುಮಾರು 4.06 ಕೋಟಿ ರೂ. ಮೌಲ್ಯದ ಭೂಮಿ ಮತ್ತು ಫ್ಲ್ಯಾಟ್ ಗಳನ್ನು ಕೇಂದ್ರ ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಟಿಡಿಆರ್ ಹಗರಣದ ಹಿನ್ನೆಲೆಯಲ್ಲಿ, ಮೇ 23ರಂದು ಇ.ಡಿ. ಅಧಿಕಾರಿಗಳು ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ, ಅದರ ನಿರ್ದೇಶಕರು, ಕೆಲ ಬಿಲ್ಡರ್‌ಗಳು, ಬ್ರೋಕರಿಗಳು ಮತ್ತು ನಕಲಿ ಟಿಡಿಆರ್ ಅರ್ಜಿದಾರರ ಮನೆ ಸೇರಿದಂತೆ 9 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಇದೀಗ ಆರೋಪಿಗಳ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ.
2009 ರಿಂದ 2015ರ ನಡುವೆ BBMP/BDA ವ್ಯಾಪ್ತಿಯಲ್ಲಿ ನಡೆದ ಟಿಡಿಆರ್ ಹಗರಣ ಸಂಬಂಧ, ಹಿಂದಿನ ಎಸಿಬಿ ಎಫ್‌ಐಆರ್‌ನಲ್ಲಿ VRHPL ಕಂಪನಿ ಟಿಡಿಆರ್ ಪಡೆದು ಅದನ್ನು ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟಮಾಡಿ ಸುಮಾರು 27.68 ಕೋಟಿ ರೂ. ಅಕ್ರಮ ಲಾಭ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಆಧಾರವಾಗಿ ಇ.ಡಿ. ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ತನಿಖೆ ನಡೆಸಿದ್ದರು.
ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳು, ಡೆವಲಪರ್ಸ್ ಮತ್ತು ಬ್ರೋಕರಿಗಳು ಭಾಗಿಯಾಗಿರುವುದು ಇ.ಡಿ. ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೇ ಆಧಾರವಾಗಿ ಅವರು ನಗರದಲ್ಲಿ ವಿವಿಧೆಡೆ ದಾಳಿ ನಡೆಸಿದ್ದರು.