New York: ರಷ್ಯಾದಿಂದ ತೈಲ ಖರೀದಿಸುವುದಕ್ಕಾಗಿ ಭಾರತದ ಮೇಲೆ ವಿಧಿಸಿದ ಸುಂಕಗಳು, ವಾಷಿಂಗ್ಟನ್ ಜೊತೆ ಮಾತುಕತೆ ನಡೆಸುವ ರಷ್ಯಾದ ನಿರ್ಧಾರಕ್ಕೆ ಪ್ರಭಾವ ಬೀರಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅವರು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಾವು ಭಾರತಕ್ಕೆ, ನೀವು ರಷ್ಯಾ ತೈಲ ಖರೀದಿಸಿದರೆ ಸುಂಕ ವಿಧಿಸುತ್ತೇವೆ ಎಂದು ತಿಳಿಸಿದ್ದೇವೆ. ಇದರಿಂದ ರಷ್ಯಾ ತನ್ನ ಎರಡನೇ ಅತಿದೊಡ್ಡ ಗ್ರಾಹಕರನ್ನು ಕಳೆದುಕೊಂಡಿದೆ. ಈಗ ಅವರು (ಪುಟಿನ್) ನಮ್ಮೊಂದಿಗೆ ಭೇಟಿಯಾಗಲು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಭಾರತವು ರಷ್ಯಾದ ತೈಲದ ಎರಡನೇ ಅತಿದೊಡ್ಡ ಖರೀದಿದಾರ, ಚೀನಾ ಮೊದಲ ಸ್ಥಾನದಲ್ಲಿದೆ. ಟ್ರಂಪ್ ಕಳೆದ ವಾರ, ರಷ್ಯಾದ ತೈಲ ಆಮದು ನಿಲ್ಲಿಸದ ಹಿನ್ನೆಲೆಯಲ್ಲಿ, ಭಾರತದಿಂದ ಅಮೆರಿಕಕ್ಕೆ ಆಗುವ ಆಮದುಗಳ ಮೇಲೆ ಹೆಚ್ಚುವರಿಯಾಗಿ 25% ಸುಂಕ ವಿಧಿಸಿ, ಒಟ್ಟು ಸುಂಕವನ್ನು 50% ಕ್ಕೆ ಏರಿಸಿದರು. ಈ ಸುಂಕಗಳು ಆಗಸ್ಟ್ 27ರಿಂದ ಜಾರಿಯಾಗಲಿವೆ.
ಅಮೆರಿಕದ ಈ ಕ್ರಮದಿಂದ, ಭಾರತದಿಂದಾಗುವ 40 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಹೊಡೆತಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ರಷ್ಯಾದಿಂದ ತೈಲ ಆಮದು ನಿಲ್ಲಿಸುವ ಅಥವಾ ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಆದರೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಎ.ಎಸ್. ಸಾಹ್ನಿ, “ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಯೋಚನೆ ಇಲ್ಲ. ಬೆಲೆ ಹಾಗೂ ಗುಣಮಟ್ಟ ನಮ್ಮ ಯೋಜನೆಗೆ ಸರಿಹೊಂದಿದರೆ ಖರೀದಿ ಮುಂದುವರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.