ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಲಾಸ್ಕಾದಲ್ಲಿ ಎರಡೂವರೆ ಗಂಟೆಗಳ ಕಾಲ ಮಾತುಕತೆ ನಡೆಯಿತು. ಆದರೆ ಈ ಮಾತುಕತೆಯಿಂದ ಯಾವುದೇ ಒಪ್ಪಂದ ಆಗಲಿಲ್ಲ. ಇದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿತ್ತು.
ಉಕ್ರೇನ್ ಯುದ್ಧ ಮತ್ತು ಯುರೋಪಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಈ ಮಾತುಕತೆ ನಡೆಯಿತು. 2019ರ ನಂತರ ಇಬ್ಬರು ಮುಖಾಮುಖಿಯಾಗಿ ಭೇಟಿಯಾಗಿರುವುದು ಇದೇ ಮೊದಲು. ಶಾಂತಿ ಸ್ಥಾಪನೆಯ ಉದ್ದೇಶವಿತ್ತು, ಆದರೆ ಒಪ್ಪಂದ ಸಾಧ್ಯವಾಗಲಿಲ್ಲ.
ಟ್ರಂಪ್, ಪುಟಿನ್ ಅವರಿಂದ ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಭರವಸೆ ಪಡೆಯಲು ಯತ್ನಿಸಿದರು. ಆದರೆ ಯಾವುದೇ ನಿರ್ಧಾರ ಆಗಲಿಲ್ಲ. ಮಾತುಕತೆಯಲ್ಲಿ ಕೆಲವು ಅಂಶಗಳಲ್ಲಿ ಒಪ್ಪಂದವಾದರೂ, ಮುಖ್ಯ ವಿಷಯಗಳಲ್ಲಿ ಇನ್ನೂ ಭಿನ್ನಾಭಿಪ್ರಾಯ ಉಳಿದಿದೆ ಎಂದು ಟ್ರಂಪ್ ಹೇಳಿದರು.
ಪುಟಿನ್ ಯುದ್ಧ ಅಂತ್ಯಗೊಳಿಸಲು ತಾವು ಬಯಸುತ್ತೇವೆ ಎಂದರೂ, ಮೊದಲು ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸಬೇಕೆಂದರು. ಅಲ್ಲದೆ, ಉಕ್ರೇನ್ ಮತ್ತು ಯುರೋಪ್ ಮಾತುಕತೆ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎಂದು ಎಚ್ಚರಿಕೆ ನೀಡಿದರು.
ಈ ಮಾತುಕತೆ ಭಾರತಕ್ಕೂ ಮಹತ್ವದ್ದಾಗಿದೆ. ಈಗಾಗಲೇ ಅಮೆರಿಕಾ ಭಾರತದ ಉತ್ಪನ್ನಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿದೆ. ಮಾತುಕತೆ ವಿಫಲವಾದರೆ ಇನ್ನೂ ಹೆಚ್ಚು ತೆರಿಗೆ ಹಾಕಬಹುದು ಎಂದು ಅಮೆರಿಕಾ ಮುನ್ನೆಚ್ಚರಿಕೆ ನೀಡಿತ್ತು.
ಅಮೆರಿಕಾ ತೆರಿಗೆ ಒತ್ತಡದಿಂದ ರಷ್ಯಾವನ್ನು ತಡೆಯಲು ಸಾಧ್ಯವಿಲ್ಲ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ. ಆದರೆ ಟ್ರಂಪ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ, ಮಾತುಕತೆ ಫಲಕಾರಿಯಾಗದ ಹಿನ್ನೆಲೆ, ಭಾರತದ ಮೇಲೆ ಅಮೆರಿಕಾ ಇನ್ನಷ್ಟು ಸುಂಕದ ಬರೆ ಹಾಕಬಹುದೇ ಎಂಬ ಆತಂಕ ಮತ್ತೆ ಹೆಚ್ಚಿದೆ.