Mumbai: ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಳಿಗಳು ನೀರಿನಲ್ಲಿ ಮುಳುಗಿರುವುದರಿಂದ ಹಾರ್ಬರ್ ಲೈನ್ ರೈಲು ಸೇವೆ ಸ್ಥಗಿತಗೊಂಡಿದೆ. ಸಿಎಸ್ಎಂಟಿ–ಕುರ್ಲಾ ಮಾರ್ಗದ ರೈಲುಗಳು ಇಂದು ಬೆಳಗ್ಗೆ 11.20ರಿಂದ ನಿಂತಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಿಥಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಹಳಿಗಳು ಸುಮಾರು 12 ಇಂಚು ನೀರಿನಲ್ಲಿ ಮುಳುಗಿವೆ. ಚುನ್ನಭಟ್ಟಿ ಸ್ಟೇಷನ್ ಜಲಾವೃತಗೊಂಡ ಹಿನ್ನೆಲೆಯಲ್ಲಿ, ಹಾರ್ಬರ್ ಲೈನ್ ರೈಲುಗಳನ್ನು ಮುಂದಿನ ಸೂಚನೆವರೆಗೆ ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆ ವಿಭಾಗೀಯ ಮ್ಯಾನೇಜರ್ ಹಿರೇನ್ ಮೀನಾ ತಿಳಿಸಿದ್ದಾರೆ. ಜನರು ತುಂಬಾ ಅಗತ್ಯವಿದ್ದಾಗ ಮಾತ್ರ ಹೊರ ಬರಬೇಕು ಎಂದು ಮನವಿ ಮಾಡಿದ್ದಾರೆ.
ಹವಾಮಾನ ಇಲಾಖೆ ತೀವ್ರ ಮಳೆಯ ಮುನ್ಸೂಚನೆ ನೀಡಿರುವುದರಿಂದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಬಿಎಂಸಿ ಖಾಸಗಿ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.
ಮಳೆಯಿಂದಾಗಿ ಪರಿಸ್ಥಿತಿ ಗಂಭೀರವಾಗಿರುವುದರಿಂದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಗಸ್ಟ್ 18ರಿಂದ 20ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಮುಂಬೈಗೆ 250 ಮಿ.ಮೀ. ಮಳೆ ದಾಖಲಾಗಿದೆ. ಬಾಂದ್ರಾ-ಖಾರ್ ರಸ್ತೆ, ಚೆಂಬೂರ್, ವಸೈ-ವಿರಾರ್ ಮತ್ತು ಇತರೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.