New Delhi: ಭಾರತದ ಚುನಾವಣೆಗೆ ಅಮೆರಿಕ ಹಣ ನೀಡಿದೆ ಎಂಬ ಟ್ರಂಪ್ ಹೇಳಿಕೆಗೆ ತೆರೆ ಬಿದ್ದಿದೆ. ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ (USUS Embassy) ಸ್ಪಷ್ಟಪಡಿಸಿದ್ದು, 2014ರಿಂದ 2024ರವರೆಗೆ USAID ಭಾರತದಲ್ಲಿ ಮತದಾನ ಸಂಬಂಧಿತ ಯಾವುದೇ ಯೋಜನೆಗೆ ಹಣ ನೀಡಿಲ್ಲ ಎಂದು ತಿಳಿಸಿದೆ.
DOGE ಪ್ರಕಟಣೆ ಮತ್ತು ಟ್ರಂಪ್ ಅವರ ಪುನರಾವರ್ತಿತ ಆರೋಪಗಳಿಂದ ಗೊಂದಲ ಉಂಟಾಗಿದ್ದರೂ, ರಾಯಭಾರ ಕಚೇರಿ ಅದನ್ನು ತಳ್ಳಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿಗೆ ಮತದಾನಕ್ಕಾಗಿ 21 ಮಿಲಿಯನ್ ಡಾಲರ್ ಪಾವತಿಸಲಾಗಿದೆ ಎಂಬ ಟ್ರಂಪ್ ಹೇಳಿಕೆಯನ್ನು ಅಮೆರಿಕದ ರಾಯಭಾರ ಕಚೇರಿಯೇ ನಿರಾಕರಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸತ್ತಿಗೆ ತಿಳಿಸಿದಂತೆ, USAID ಮತ್ತು ಭಾರತ ಸರ್ಕಾರದ ನಡುವೆ ಇದ್ದ ಎಲ್ಲಾ 7 ಒಪ್ಪಂದಗಳು ಆಗಸ್ಟ್ 15ಕ್ಕೆ ಕೊನೆಗೊಂಡಿವೆ. ಜೊತೆಗೆ, ಕಳೆದ ದಶಕದಲ್ಲಿ ನಡೆದ ಯೋಜನೆಗಳ ವಿವರಗಳನ್ನು ರಾಯಭಾರ ಕಚೇರಿಯೇ ಹಂಚಿಕೊಂಡಿದ್ದು, ಮತದಾರರ ಯೋಜನೆಗಳಿಗೆ ಯಾವುದೇ ನಿಧಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
DOGE ಫೆಬ್ರವರಿ 2025ರಲ್ಲಿ ವಿಶ್ವದ 486 ಮಿಲಿಯನ್ ಡಾಲರ್ ನಿಧಿಯನ್ನು ರದ್ದುಪಡಿಸಿ ಪ್ರಕಟಣೆ ಹೊರಡಿಸಿದ್ದಾಗ, ಅದರಲ್ಲಿ “ಭಾರತದಲ್ಲಿ ಮತದಾನಕ್ಕೆ 21 ಮಿಲಿಯನ್ ಡಾಲರ್ ಮೀಸಲಿತ್ತು” ಎಂಬ ಉಲ್ಲೇಖವಿತ್ತು. ಇದೇ ಕಾರಣಕ್ಕೆ ಭಾರತ ವಿದೇಶಾಂಗ ಸಚಿವಾಲಯ ರಾಯಭಾರ ಕಚೇರಿಯಿಂದ ಸಂಪೂರ್ಣ ವಿವರ ಕೇಳಿಸಿತ್ತು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಭಾರತದ ಚುನಾವಣೆಗಾಗಿ 21 ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಅಮೆರಿಕದ ತೆರಿಗೆದಾರರ ಹಣವನ್ನು ವಿದೇಶಿ ಚುನಾವಣೆಗಳಿಗೆ ಏಕೆ ಬಳಸಬೇಕು?” ಎಂದು ಪ್ರಶ್ನಿಸಿದ ಪರಿಣಾಮ ಭಾರತಕ್ಕೆ ಮುಜುಗರವಾಗಿತ್ತು.