Mumbai: ಮರಾಠಾ ಮೀಸಲಾತಿ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮನೋಜ್ ಜರಾಂಗೆ ಪಾಟೀಲ್ (Manoj Jarange Patil) ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಛತ್ರಪತಿ ಸಂಭಾಜಿನಗರದ ಗ್ಯಾಲಕ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಆರೋಗ್ಯ ಪರೀಕ್ಷೆ ನಡೆಸಿ, ದೀರ್ಘಕಾಲದ ಉಪವಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದನ್ನು ತಿಳಿಸಿದ್ದಾರೆ. ಕನಿಷ್ಠ ಎರಡು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ.
ಸರ್ಕಾರ ಬೇಡಿಕೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮ ವ್ಯಕ್ತವಾಗಿದೆ. ಛತ್ರಪತಿ ಸಂಭಾಜಿನಗರ ಸೇರಿದಂತೆ ಹಲವು ಕಡೆ ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಜನರು ಸಂತೋಷ ಆಚರಿಸಿದ್ದಾರೆ. ಈ ನಿರ್ಧಾರದಿಂದ ಮರಾಠಾ ಸಮುದಾಯದ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸಮಾಧಾನ ಲಭಿಸಿದೆ.
ಮನೋಜ್ ಜರಾಂಗೆ ಆಸ್ಪತ್ರೆಗೆ ಬಂದ ಸುದ್ದಿ ತಿಳಿದ ಕೂಡಲೇ ಸಮುದಾಯದ ನೂರಾರು ಜನರು ಮಧ್ಯರಾತ್ರಿ ಆಸ್ಪತ್ರೆಗೆ ಜಮಾಯಿಸಿ ಪಟಾಕಿ ಸಿಡಿಸಿ, ಹೂವಿನ ಮಳೆಯೊಂದಿಗೆ ಅವರನ್ನು ಸ್ವಾಗತಿಸಿದರು. ಈ ಸಂದರ್ಭ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಜನರ ದಟ್ಟಣೆ ಸಾಧ್ಯತೆ ಇರುವುದರಿಂದ ಸಹಕಾರ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.








