ಕೃತಕ ಬುದ್ಧಿಮತ್ತೆ (AI) ಈಗ ವೈದ್ಯಕೀಯ ಕ್ಷೇತ್ರದಲ್ಲಿಯೂ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿದೆ. ವೈದ್ಯರ ವಿಶ್ವಾಸಾರ್ಹ ಸಾಧನವಾದ ಸ್ಟೆತೊಸ್ಕೋಪ್‌ಗೆ ಈಗ ಎಐ ತಂತ್ರಜ್ಞಾನ ಸೇರಿದೆ.
ಕ್ಯಾಲಿಫೋರ್ನಿಯಾದ ಇಕೊ ಹೆಲ್ತ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜ್ ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ಎಐ ಸ್ಟೆತೊಸ್ಕೋಪ್ ಕೇವಲ 15 ಸೆಕೆಂಡುಗಳಲ್ಲಿ ಮೂರು ದೊಡ್ಡ ಹೃದಯ ಕಾಯಿಲೆಗಳನ್ನು ಪತ್ತೆಹಚ್ಚುತ್ತದೆ –
- ಹೃದಯ ವೈಫಲ್ಯ (Heart Failure)
- ಹೃತ್ಕರ್ಣದ ಕಂಪನ (Atrial Fibrillation)
- ಹೃದಯ ಕವಾಟದ ಕಾಯಿಲೆ (Heart Valve Disease)
ಈ ಸಾಧನದಲ್ಲಿ ಮೈಕ್ರೊಫೋನ್ ಹಾಗೂ ECG ತಂತ್ರಜ್ಞಾನ ಕೂಡಾ ಅಳವಡಿಸಲಾಗಿದೆ. ಹೃದಯದ ಬಡಿತ ಮತ್ತು ರಕ್ತದ ಹರಿವಿನ ಸಣ್ಣ ಬದಲಾವಣೆಗಳನ್ನೂ ಇದು ಸೆರೆಹಿಡಿಯುತ್ತದೆ. ಸಾಮಾನ್ಯ ಸ್ಟೆತೊಸ್ಕೋಪ್‌ಗಿಂತ ಇದರಿಂದ ಹೆಚ್ಚು ನಿಖರ ಮಾಹಿತಿ ಸಿಗುತ್ತದೆ.
ಸಾಧನದಿಂದ ಪಡೆದ ಡೇಟಾ ಕ್ಲೌಡ್‌ಗೆ ಅಪ್ಲೋಡ್ ಆಗುತ್ತದೆ. ಅಲ್ಲಿ ಸಾವಿರಾರು ರೋಗಿಗಳ ದಾಖಲೆಗಳ ಆಧಾರದ ಮೇಲೆ ತರಬೇತಿ ಪಡೆದ ಎಐ ಅಲ್ಗಾರಿದಮ್ ಡೇಟಾವನ್ನು ವಿಶ್ಲೇಷಿಸುತ್ತದೆ. ಫಲಿತಾಂಶವನ್ನು ತಕ್ಷಣವೇ ಸ್ಮಾರ್ಟ್‌ಫೋನ್‌ಗೆ ಕಳುಹಿಸಲಾಗುತ್ತದೆ. ಇದರಿಂದ ವೈದ್ಯರು ಬೇಗ ಚಿಕಿತ್ಸೆ ಪ್ರಾರಂಭಿಸಬಹುದು.
ಯುಕೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ 12,700 ಕ್ಕೂ ಹೆಚ್ಚು ರೋಗಿಗಳ ಮೇಲೆ ಈ ಎಐ ಸ್ಟೆತೊಸ್ಕೋಪ್ ಬಳಕೆಯಾಯಿತು. ಫಲಿತಾಂಶದಲ್ಲಿ ಈ ಸಾಧನ ಬಳಸಿದವರಲ್ಲಿ ಹೃದಯ ವೈಫಲ್ಯದ ಸಾಧ್ಯತೆ 2.3 ಪಟ್ಟು ಹೆಚ್ಚು, ಹೃತ್ಕರ್ಣದ ಕಂಪನ 3.5 ಪಟ್ಟು ಹೆಚ್ಚು, ಹೃದಯ ಕವಾಟದ ಕಾಯಿಲೆ 2 ಪಟ್ಟು ಹೆಚ್ಚು ಪತ್ತೆಯಾಗಿದೆ.