Bengaluru: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರ ಚೆಳ್ಳಕೆರೆ ಹಾಗೂ ಬೆಂಗಳೂರಿನ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಈ ಸಂದರ್ಭದಲ್ಲಿ 55 ಕೋಟಿ ರೂಪಾಯಿ ನಗದು ಹಾಗೂ ದುಬಾರಿ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ.
ಸೆಪ್ಟೆಂಬರ್ 2ರಂದು ನಡೆದ ಶೋಧದಲ್ಲಿ ಐದು ಕಾರುಗಳನ್ನು ಜಪ್ತಿ ಮಾಡಲಾಗಿದೆ. ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳು ಹಾಗೂ ಡಿಮ್ಯಾಟ್ ಖಾತೆಯಲ್ಲಿದ್ದ 40.69 ಕೋಟಿ ರೂಪಾಯಿ ಸೇರಿದಂತೆ ಒಟ್ಟು 55 ಕೋಟಿ ಹಣವನ್ನು ಇಡಿ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ 12 ಕೋಟಿ ನಗದು ಹಾಗೂ 14.46 ಕೋಟಿ ರೂಪಾಯಿ ವಿವಿಧ ಬ್ಯಾಂಕ್ ಖಾತೆಗಳಿಂದ ವಶಪಡಿಸಿಕೊಳ್ಳಲಾಗಿದೆ.
ಆಗಸ್ಟ್ 23ರಂದು ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್‌ನಲ್ಲಿ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು. ಅಕ್ರಮ ಆನ್‌ಲೈನ್ ಹಾಗೂ ಆಫ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ. ಈ ವೇಳೆ 1 ಕೋಟಿ ವಿದೇಶಿ ಕರೆನ್ಸಿ, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆ.ಜಿ. ಬೆಳ್ಳಿ ವಸ್ತುಗಳು, 12 ಕೋಟಿ ನಗದು ಹಾಗೂ 4 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಕ್ಕೂ ನಡುವೆ, ಶಾಸಕ ವೀರೇಂದ್ರ ಪತ್ನಿ ಚೈತ್ರಾ, ಬಂಧನವನ್ನು ಅಕ್ರಮ ಎಂದು ಘೋಷಿಸುವಂತೆ ರಾಜ್ಯ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 3ರಂದು ವಿಚಾರಣೆ ನಡೆಸಿದ ಹೈಕೋರ್ಟ್, ಇಡಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.