Tianjin: ಅಮೆರಿಕ ಸರ್ಕಾರ ರಷ್ಯಾದ ಜೊತೆ ವ್ಯಾಪಾರ ಮಾಡುತ್ತಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ಹಾಕಿದೆ. ಇದರ ಬೆನ್ನಲ್ಲೇ ಚೀನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಪರವಾಗಿ ಧ್ವನಿ ಎತ್ತಿದ್ದಾರೆ.
ಟ್ರಂಪ್ ಭಾರತವನ್ನು “ಸತ್ತ ಆರ್ಥಿಕತೆ” ಎಂದು ಕರೆದಿದ್ದರೂ, ಪುಟಿನ್ “ಭಾರತ ದೊಡ್ಡ ಆರ್ಥಿಕ ಶಕ್ತಿ ಹೊಂದಿದ ದೇಶ” ಎಂದು ಸಮರ್ಥಿಸಿಕೊಂಡಿದ್ದಾರೆ.
ಭಾರತ ಮತ್ತು ಚೀನಾದ ಮೇಲೆ ನಡೆಯುತ್ತಿರುವ ಆರ್ಥಿಕ ಒತ್ತಡದ ಬಗ್ಗೆ ಮಾತನಾಡಿದ ಪುಟಿನ್,
“ವಸಾಹತು ಯುಗ ಮುಗಿದಿದೆ. ಇಂದಿನ ಯುಗದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಭಾರತ ಮತ್ತು ಚೀನಾ ದೈತ್ಯ ಆರ್ಥಿಕ ರಾಷ್ಟ್ರಗಳು. ಯಾರೂ ಅವುಗಳೊಂದಿಗೆ ಹೀಗೆ ಮಾತನಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಅವರು ಮುಂದುವರಿದು, “ಭಾರತ, ಚೀನಾ, ರಷ್ಯಾ ಎಲ್ಲವೂ ಕಷ್ಟಪಟ್ಟು ದೇಶ ಕಟ್ಟಿಕೊಂಡಿವೆ. ಇವುಗಳ ನಾಯಕತ್ವವನ್ನು ದುರ್ಬಲಗೊಳಿಸಲು ಯತ್ನಿಸುವುದು ತಪ್ಪು” ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪುಟಿನ್ ಕೊನೆಗೆ, “ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಯಾವುದೇ ಒಂದು ದೇಶ ಜಾಗತಿಕ ರಾಜಕೀಯ ಅಥವಾ ಭದ್ರತೆಯಲ್ಲಿ ಏಕಪಕ್ಷೀಯ ಪ್ರಭಾವ ಸಾಧಿಸಬಾರದು” ಎಂದು ಸ್ಪಷ್ಟಪಡಿಸಿದ್ದಾರೆ.