Boston: ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿದ್ದ 2.6 ಬಿಲಿಯನ್ ಡಾಲರ್ ಸಂಶೋಧನಾ ಅನುದಾನವನ್ನು ಕಡಿತಗೊಳಿಸುವ ಟ್ರಂಪ್ ಆಡಳಿತದ ಆದೇಶವನ್ನು ಬೋಸ್ಟನ್ ಫೆಡರಲ್ ನ್ಯಾಯಾಲಯ ರದ್ದುಪಡಿಸಿದೆ.
ನ್ಯಾಯಾಲಯದ ತೀರ್ಪು ಹಾರ್ವರ್ಡ್ ವಿವಿಗೆ ದೊಡ್ಡ ಗೆಲುವಾಗಿದ್ದು, ಟ್ರಂಪ್ ಆಡಳಿತದ ಪ್ರತೀಕಾರಾತ್ಮಕ ನಡೆ ಎಂದು ಜಿಲ್ಲಾ ನ್ಯಾಯಾಧೀಶ ಆಲಿಸನ್ ಬರೋಸ್ ಟೀಕಿಸಿದ್ದಾರೆ.
ಸರ್ಕಾರ ಯಹೂದಿ ವಿರೋಧಿ ನೀತಿಯನ್ನು ನೆಪವನ್ನಾಗಿ ಮಾಡಿಕೊಂಡು ಅನುದಾನವನ್ನು ತಡೆಹಿಡಿದರೂ, ಅದಕ್ಕೆ ವಿಶ್ವವಿದ್ಯಾಲಯದ ಸಂಶೋಧನಾ ನಿಧಿಯೊಂದಿಗೆ ಹೆಚ್ಚು ಸಂಬಂಧವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಮೆರಿಕಾದಲ್ಲಿ ಯಹೂದಿ ವಿರೋಧದ ವಿರುದ್ಧ ಹೋರಾಟ ಅಗತ್ಯವಾದರೂ, ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಾಪಾಡುವುದು ಮುಖ್ಯ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಶ್ವೇತಭವನದ ವಕ್ತಾರ ಲಿಜ್ ಹಸ್ಟನ್ ಪ್ರತಿಕ್ರಿಯಿಸಿ, ಅನುದಾನ ಪುನರ್ ಸ್ಥಾಪನೆಯಿಂದ ಹಾರ್ವರ್ಡ್‌ನ ನೂರಾರು ಸಂಶೋಧನಾ ಯೋಜನೆಗಳು ಮುಂದುವರಿಯಲಿವೆ ಎಂದಿದ್ದಾರೆ. ಆದರೆ ಸರ್ಕಾರ ಮೇಲ್ಮನವಿ ಸಲ್ಲಿಸುವುದಾಗಿ ಕೂಡ ತಿಳಿಸಿದ್ದಾರೆ.
ಟ್ರಂಪ್ ಆಡಳಿತ ಏಪ್ರಿಲ್ 11ರಂದು ಹಾರ್ವರ್ಡ್‌ಗೆ ಪತ್ರ ಬರೆದು, ಕ್ಯಾಂಪಸ್ ಪ್ರತಿಭಟನೆಗಳು, ಪ್ರವೇಶ ಹಾಗೂ ನೀತಿಗಳ ಬದಲಾವಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ವಿಶ್ವವಿದ್ಯಾಲಯ ಇದನ್ನು ತಿರಸ್ಕರಿಸಿದ ನಂತರ ಅನುದಾನವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಹಾರ್ವರ್ಡ್ ನ್ಯಾಯಾಲಯದ ಬಾಗಿಲು ತಟ್ಟಿತ್ತು.