ಬೆಂಗಳೂರು (Bengaluru) ನಗರದಲ್ಲಿ ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸಿಸುತ್ತಿರುವುದು (illegal residence) ಪತ್ತೆಯಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸರು ಮುಂದಾಗಿದ್ದಾರೆ. ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆ ಬಾಡಿಗೆಗೆ ನೀಡಿದ ಮನೆ ಮಾಲೀಕರ ಮೇಲೂ ಪ್ರಕರಣ ದಾಖಲಾಗಿದೆ.
ನಗರಕ್ಕೆ ಬರುವ ಹಲವಾರು ವಿದೇಶಿ ಪ್ರಜೆಗಳು ಪಾಸ್‌ಪೋರ್ಟ್, ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿ ವಾಸಿಸುತ್ತಾರೆ. ಕೆಲವರು ಹಣ ಸಂಪಾದನೆಗಾಗಿ ಬೇರೆ ಮಾರ್ಗಗಳನ್ನು ಹಿಡಿದು ನಂತರ ಪೊಲೀಸರ ಕೈಗೆ ಸಿಕ್ಕಿದ್ದಾರೆ.
ಪೊಲೀಸ್ ಠಾಣೆಗೆ ಸಿ ಫಾರಂ ಸಲ್ಲಿಸದೆ, ದಾಖಲೆ ಪಡೆಯದೆ ಮನೆ ನೀಡಿದವರ ವಿರುದ್ಧ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ.
ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ ಠಾಣೆಯಲ್ಲಿ ತಲಾ 1 ಪ್ರಕರಣ, ಕೊಡಿಗೆಹಳ್ಳಿ ಹಾಗೂ ಚಿಕ್ಕಜಾಲದಲ್ಲಿ ತಲಾ 2, ಯಲಹಂಕ ನ್ಯೂ ಟೌನ್‌ನಲ್ಲಿ 3, ಕೊತ್ತನೂರಿನಲ್ಲಿ 5 ಮತ್ತು ಯಲಹಂಕ ಠಾಣೆಯಲ್ಲಿ 7 ಪ್ರಕರಣ ಸೇರಿದಂತೆ ಒಟ್ಟು 23 ಪ್ರಕರಣ ದಾಖಲಾಗಿದೆ.
ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವಾಗ ಪಾಲಿಸಬೇಕಾದ ನಿಯಮಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.
- ಸಿ ಫಾರಂ ಅನ್ನು ಎಫ್ಆರ್ಆರ್ಓಗೆ ಸಲ್ಲಿಸಬೇಕು.
- ಬಾಡಿಗೆದಾರರ ಪಾಸ್‌ಪೋರ್ಟ್, ವೀಸಾ ಪ್ರತಿಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು.
- ಮನೆ ನೀಡುವ ಮೊದಲು ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು.
- ಮಾನ್ಯ ವೀಸಾ ಅಥವಾ ಅನುಮತಿ ಇಲ್ಲದೆ ವಾಸಿಸಲು ಅವಕಾಶ ಕೊಡಬಾರದು.
- ನೊಂದಾಯಿತ ಬಾಡಿಗೆ ಒಪ್ಪಂದ ಮಾಡಬೇಕು.
- ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು.