Kalaburagi: ಕಲಬುರಗಿಯ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಕೆಲ ರೈತ ಸಂಪರ್ಕ ಕೇಂದ್ರಗಳು ಎರಡು ವರ್ಷಗಳ ಹಿಂದೆಯೇ ಅವಧಿ ಮೀರಿದ ಕ್ರಿಮಿನಾಶಕಗಳನ್ನು ರೈತರಿಗೆ ಮಾರಾಟ ಮಾಡುತ್ತಿರುವುದು ಬಹಿರಂಗವಾಗಿದೆ. ಇದರಿಂದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಸಿರು ಸೇನೆ ರೈತ ಸಂಘದ ಮುಖಂಡರು, “ಅವಧಿ ಮೀರಿದ ಔಷಧಿ ನೀಡಿದ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಹಾಗೂ ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ವಂಚಿಸಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆಯಬೇಕು” ಎಂದು ಆಗ್ರಹಿಸಿದ್ದಾರೆ. ಕೃಷಿ ಸಚಿವರು ಈ ವಿಷಯದಲ್ಲಿ ಮೌನವಾಗಿರುವುದಕ್ಕೂ ಆಕ್ರೋಶ ವ್ಯಕ್ತವಾಗಿದೆ.
ಇದರ ಜೊತೆಗೆ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿ ಫರ್ಟಿಲೈಸರ್ ಅಂಗಡಿ ಮಾಲೀಕರು ಗೊಬ್ಬರ ಮತ್ತು ಇತರೆ ವಸ್ತುಗಳನ್ನು ಎಂಆರ್ಪಿ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ರೈತರು ಬಿಲ್ ಕೇಳಿದಾಗ ನಕಲಿ ಬಿಲ್ ನೀಡಿರುವುದೂ ಬಹಿರಂಗವಾಗಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆದ ನಂತರ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದ್ದಾರೆ.
ಅವಧಿ ಮೀರಿದ ಕ್ರಿಮಿನಾಶಕ ಹಾಗೂ ದುಪ್ಪಟ್ಟು ದರಕ್ಕೆ ಗೊಬ್ಬರ ಮಾರಾಟ ಮಾಡಿದ ಅಂಗಡಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.