ಧರ್ಮಸ್ಥಳದ ವಿಷಯದಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ಅದರ ಹಿಂದೆ ಯಾರು ಇದ್ದಾರೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಸರಿಯಾಗಿ ತನಿಖೆ ಮಾಡುತ್ತಿಲ್ಲ. ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president B.Y. Vijayendra) ಹೇಳಿದರು.
ನವದೆಹಲಿಯಲ್ಲಿ ಸೋಮವಾರ ರಾತ್ರಿ ಅಮಿತ್ ಶಾ ಅವರನ್ನು ಬಿಜೆಪಿ ನಿಯೋಗ ಭೇಟಿಯಾಯಿತು. ಈ ನಿಯೋಗದಲ್ಲಿ ಪ್ರಹ್ಲಾದ್ ಜೋಶಿ, ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಹರೀಶ್ ಪೂಂಜ, ಎಸ್.ಆರ್. ವಿಶ್ವನಾಥ್ ಹಾಗೂ ಸತೀಶ್ ಕುಂಪಲ ಭಾಗವಹಿಸಿದ್ದರು.
- ವಿಜಯೇಂದ್ರ ತಿಳಿಸಿದಂತೆ, ಅಮಿತ್ ಶಾ ಅವರಿಗೆ ಈ ಕೆಳಗಿನ ವಿಷಯಗಳನ್ನು ತಿಳಿಸಲಾಗಿದೆ,
- ಧರ್ಮಸ್ಥಳದ ವಿಚಾರದಲ್ಲಿ ನಡೆಯುತ್ತಿರುವ ಸಮಸ್ಯೆಗಳು
- ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ
- ಕೊಪ್ಪಳದ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ಹತ್ಯೆ
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು
- ಸಚಿವ ಸಂಪುಟದಲ್ಲಿ ಕೆಲವು ಪ್ರಕರಣಗಳನ್ನು ಹಿಂಪಡೆಯಿರುವುದು
ರಾಜ್ಯದಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಬೇಕಾದ ಅಧಿಕಾರವಿಲ್ಲದಂತೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿರುವ ವಿಷಯವನ್ನೂ ಅಮಿತ್ ಶಾ ಅವರ ಗಮನಕ್ಕೆ ತರುವ ಕೆಲಸ ನಡೆದಿದೆ ಎಂದು ವಿಜಯೇಂದ್ರ ಹೇಳಿದರು.
ವಿಜಯೇಂದ್ರ ಅವರು, “ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿರುವಾಗ, ವಿರೋಧ ಪಕ್ಷವಾಗಿ ನಾವು ಕೇಂದ್ರದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಅಮಿತ್ ಶಾ ಅವರ ಪ್ರತಿಕ್ರಿಯೆ ಬಗ್ಗೆ ನಂತರ ತಿಳಿಸುತ್ತೇವೆ” ಎಂದರು.