ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಅವರು ದೇಶದ ನೂತನ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರ ಉತ್ತರಾಧಿಕಾರಿಯಾಗುತ್ತಿದ್ದಾರೆ.
ಸಂಸತ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಬಳಿಕ 6 ಗಂಟೆಗೆ ಮತ ಎಣಿಕೆ ನಡೆಯಿತು. ಒಟ್ಟು 767 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 752 ಮತಗಳು ಮಾನ್ಯವಾಗಿವೆ.
ರಾಧಾಕೃಷ್ಣನ್ ಅವರಿಗೆ 452 ಮತಗಳು ಬಿದ್ದರೆ, ವಿರೋಧ ಪಕ್ಷಗಳ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರಿಗೆ 300 ಮತಗಳು ಮಾತ್ರ ದೊರಕಿವೆ. ಇದರೊಂದಿಗೆ NDA ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದರು.
ಲೆಕ್ಕಾಚಾರದ ಪ್ರಕಾರ ವಿರೋಧ ಪಕ್ಷಗಳ ಅಭ್ಯರ್ಥಿಗೆ 315 ಮತಗಳು ಬರಬೇಕಾಗಿತ್ತು. ಆದರೆ ಕೇವಲ 300 ಮತಗಳು ಮಾತ್ರ ಸಿಕ್ಕಿವೆ. ಇದರಿಂದ ವಿಪಕ್ಷಗಳಿಗೆ ತೀವ್ರ ಸೋಲು ತಟ್ಟಿದೆ.
“ತಮಿಳುನಾಡಿನ ಮೋದಿ” ಎಂದೇ ಖ್ಯಾತಿ ಪಡೆದಿರುವ ರಾಧಾಕೃಷ್ಣನ್ ಅವರು RSS ಸಿದ್ಧಾಂತದ ಬಲಿಷ್ಠ ಕಾರ್ಯಕರ್ತರಾಗಿದ್ದಾರೆ. ಈಗ ದೇಶದ ಎರಡನೇ ಅತ್ಯುನ್ನತ ಹುದ್ದೆ ಅವರಿಗೆ ಸಂದಿದೆ.
ಸೋಲಿನ ಬಳಿಕ ಪ್ರತಿಕ್ರಿಯಿಸಿದ ವಿರೋಧ ಪಕ್ಷಗಳ ಅಭ್ಯರ್ಥಿ ಸುದರ್ಶನ್ ರೆಡ್ಡಿ, “ಫಲಿತಾಂಶ ನನ್ನ ಪರವಾಗಿಲ್ಲದಿದ್ದರೂ ಪ್ರಜಾಪ್ರಭುತ್ವದ ಮೇಲಿನ ನನ್ನ ನಂಬಿಕೆ ಅಚಲವಾಗಿದೆ. ಸೋಲನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸುತ್ತೇನೆ” ಎಂದರು. ಅವರು ರಾಧಾಕೃಷ್ಣನ್ ಅವರಿಗೆ ಶುಭಾಶಯ ಕೋರಿದರು.
ರಾಧಾಕೃಷ್ಣನ್ ಅವರ ಗೆಲುವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದರು.