Bengaluru: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೆ ಧಾರ್ಮಿಕ ಅಸಮಾಧಾನ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಬಿಜೆಪಿ ಸದಾ ಅಲ್ಪಸಂಖ್ಯಾತರ ತುಷ್ಟೀಕರಣದ ಆರೋಪ ಮಾಡುತ್ತಲೇ ಬರುತ್ತದೆ. ಇತ್ತೀಚಿನ ಕೆಲ ಘಟನೆಗಳು ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ ತಂದಿವೆ. ಈ ಘಟನೆಗಳನ್ನು ನಿಭಾಯಿಸುವಲ್ಲಿ ಎಡವಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಭಾವನೆಗಳಿಗೆ ಸ್ಪಂದಿಸುವಲ್ಲಿ ವೈಫಲ್ಯ ಕಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಾರಿ ಗಣೇಶ ಹಬ್ಬದ ಆಚರಣೆಗೆ ಷರತ್ತು ಹಾಕಿ ಡಿಜೆಗಳಿಗೆ ನಿರ್ಬಂಧ ಹೇರಿದ ಸರ್ಕಾರ ಹಿಂದೂಗಳ ಆಕ್ರೋಶಕ್ಕೆ ಗುರಿಯಾಯಿತು. ಕಾನೂನು ಸುವ್ಯವಸ್ಥೆಯ ನೆಪದಲ್ಲಿ ಧಾರ್ಮಿಕ ಆಚರಣೆಗಳನ್ನು ನಿಯಂತ್ರಿಸಲು ಯತ್ನಿಸಲಾಗಿದೆ ಎಂಬ ಟೀಕೆಗಳೂ ಕೇಳಿ ಬಂದವು. ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ಮಸೀದಿಯೊಳಗಿಂದ ಕಲ್ಲು ತೂರಾಟ ನಡೆದ ಘಟನೆ ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಇದೇ ರೀತಿಯಾಗಿ ನಾಗಮಂಗಲದಲ್ಲಿಯೂ ಕಳೆದ ವರ್ಷ ಕೋಮು ಗಲಭೆ ನಡೆದಿತ್ತು. ಎಚ್ಚರಿಕೆ ತೆಗೆದುಕೊಳ್ಳಬೇಕಾದ ಜಿಲ್ಲಾಡಳಿತ ಮತ್ತೆ ಎಡವಿದ್ದು ಆಕ್ರೋಶ ಹೆಚ್ಚಿಸಿದೆ.
ಮೈಸೂರು ಧರ್ಮಸ್ಥಳದಲ್ಲಿ ಶವಗಳ ಪತ್ತೆಯ ಪ್ರಕರಣ, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ, ದಸರಾ ಉದ್ಘಾಟನೆಗೆ ವಿವಾದಾತ್ಮಕ ವ್ಯಕ್ತಿಗೆ ಆಹ್ವಾನ ನೀಡಿದ ಘಟನೆ. ಇವು ಸರ್ಕಾರದ ಮೇಲೆ ಹಿಂದೂ ವಿರೋಧಿ ಧೋರಣೆ ಎಂಬ ಆರೋಪಕ್ಕೆ ಕಾರಣವಾಗಿವೆ.
ಹೀಗೆ ಒಂದಾದ ಮೇಲೊಂದು ಘಟನೆಗಳಿಂದ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಎಡವುತ್ತಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಮತ ಬ್ಯಾಂಕ್ ರಾಜಕೀಯದ ದಾರಿಯಲ್ಲಿ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಏಳುತ್ತಿವೆ. ವಿರೋಧ ಪಕ್ಷಗಳು ಇದನ್ನೇ ಆಧಾರ ಮಾಡಿಕೊಂಡು “ಹಿಂದೂ ವಿರೋಧಿ ಸರ್ಕಾರ” ಎಂಬ ಹಣೆಪಟ್ಟಿ ಕಟ್ಟಲು ಪ್ರಾರಂಭಿಸಿವೆ.