ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ನಂತರ ಮದ್ದೂರಿನ ಚನ್ನೆಗೌಡ ಬಡಾವಣೆಯ ಮಸೀದಿ (Maddur Mosque) ಅಕ್ರಮ ನಿರ್ಮಾಣವೆಂಬ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಮಸೀದಿ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಮಸೀದಿ ಮುಂದೆ ದೇವರ ಉತ್ಸವಗಳು, ಮೆರವಣಿಗೆಗಳು ಸಾಗಬಾರದೆಂಬ ನಿರ್ಬಂಧ ಹೇರಲಾಗಿದೆ. ಸತ್ತವರ ಶವದ ಮುಂದೆ ತಮಟೆ ಬಾರಿಸದಂತೆ ಕೂಡ ನಿಯಮ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಸೀದಿಯಲ್ಲಿ ಮದರಸಾ ನಡೆಯುತ್ತಿದ್ದು, ದೇಶದ್ರೋಹ ಚಟುವಟಿಕೆಗಳು, ಅಪರಿಚಿತ ವ್ಯಕ್ತಿಗಳ ಸಂಚಾರ ಮತ್ತು ಅಕ್ರಮ ಹಣಕಾಸು ವ್ಯವಹಾರಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.
ಈ ಮಸೀದಿ 2025ರ ಜೂನ್‌ನಲ್ಲಿ ಉದ್ಘಾಟನೆಯಾಗಿತ್ತು. ನಿರ್ಮಾಣ ಹಂತದಲ್ಲೇ ಅಕ್ರಮ ನಡೆಯುತ್ತಿದೆ ಎಂದು ಆಡಳಿತವನ್ನು ಸ್ಥಳೀಯರು ಎಚ್ಚರಿಸಿದ್ದರು.
ಗಣಪತಿ ವಿಸರ್ಜನೆ ಮೆರವಣಿಗೆಯ ವೇಳೆ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಮಸೀದಿಯಿಂದಲೇ ಕಲ್ಲು ತೂರಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದರು.
ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಕೂಡ ತಗುಲಿದೆ. ಬಿಜೆಪಿ ನಿಯೋಗ ಮದ್ದೂರಿಗೆ ಭೇಟಿ ನೀಡುತ್ತಿದೆ. ಕಾಂಗ್ರೆಸ್ ನಾಯಕರು ಪ್ರತಿಪಕ್ಷಗಳು ಕೋಮು ರಾಜಕೀಯಕ್ಕೆ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.