Bengaluru: ರಾಜ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಗಳು ನಡೆಯುತ್ತಿರುವ ನಡುವೆ, ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರನ್ನು ಆಹ್ವಾನಿಸಿರುವ ನಿರ್ಧಾರ ವಿವಾದಕ್ಕೀಡಾಗಿದೆ.
ಇದಕ್ಕೂ ಮುನ್ನ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಹಿಂದೂ ಸಂಘಟನೆಗಳು ಚಾಮುಂಡಿ ಚಲೋ ಹೋರಾಟ ನಡೆಸಿದರೆ, ದಲಿತ ಸಂಘಟನೆಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಈಗ ಕಾನೂನು ಹೋರಾಟವೂ ಆರಂಭವಾಗಿದೆ.
ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ ಮತ್ತೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೈಕೋರ್ಟ್ಗೆ ಸಲ್ಲಿಕೆಯಾಗಿವೆ.
ಅರ್ಜಿದಾರರು, ದಸರಾ ಹಿಂದೂ ಧಾರ್ಮಿಕ ಸಂಪ್ರದಾಯದ ಭಾಗವಾಗಿರುವುದರಿಂದ, ಉದ್ಘಾಟನೆಗೆ ಹಿಂದೂ ಗಣ್ಯರನ್ನೇ ಆಹ್ವಾನಿಸಬೇಕು ಎಂದು ಬೇಡಿಕೊಂಡಿದ್ದಾರೆ. ಭಕ್ತರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಿಂದೂ ಆಚರಣೆ ಪ್ರಕಾರವೇ ಉದ್ಘಾಟನೆ ನಡೆಯಬೇಕು ಎಂದು ವಾದಿಸಿದ್ದಾರೆ.
ಬೆಂಗಳೂರು ನಿವಾಸಿ ಎಚ್.ಎಸ್. ಗೌರವ್, ಉದ್ಯಮಿ ಟಿ. ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ಉಪಾಧ್ಯಕ್ಷೆ ಆರ್. ಸೌಮ್ಯ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ನಿರ್ಧಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇದನ್ನು “ಚಾಮುಂಡಿತಾಯಿಗೆ ಅವಮಾನ” ಎಂದರೆ, ಜೆಡಿಎಸ್ ಶಾಸಕ ಎಂ. ಮಂಜು “ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದಾದರೆ ಪೂಜೆ ವಿಧಿಗಳನ್ನೂ ಪಾಲಿಸಬೇಕು” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಈಗಾಗಲೇ ಮೂರು ಅರ್ಜಿಗಳು ಹೈಕೋರ್ಟ್ ಮುಂದಿವೆ. ನ್ಯಾಯಾಲಯವೇ ಈ ವಿವಾದಕ್ಕೆ ಅಂತಿಮ ಉತ್ತರ ನೀಡಬೇಕಿದೆ.