ಫುಟ್ಬಾಲ್ ವಿಶ್ವಕಪ್ (Football World Cup) ಅರ್ಹತಾ ಸುತ್ತಿನಲ್ಲಿ ಪೋರ್ಚುಗಲ್ ತಂಡ ಹಂಗೇರಿ ವಿರುದ್ಧ 3-2 ಅಂತರದಲ್ಲಿ ರೋಚಕ ಜಯ ಸಾಧಿಸಿದೆ. ಮುಂದಿನ ವರ್ಷ ಮೆಕ್ಸಿಕೋ, ಅಮೆರಿಕ ಮತ್ತು ಕೆನಡಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಒಟ್ಟು 48 ತಂಡಗಳು ಪಾಲ್ಗೊಳ್ಳಲಿವೆ.
ಪಂದ್ಯದ ಆರಂಭದಲ್ಲಿ ಹಂಗೇರಿ ಪರ ಬರ್ನಾಬಸ್ ವರ್ಗಾ 21ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. 36ನೇ ನಿಮಿಷದಲ್ಲಿ ಪೋರ್ಚುಗಲ್ ಪರ ಬರ್ನಾರ್ಡೊ ಸಿಲ್ವಾ ಗೋಲು ಬಾರಿಸಿದರು. ಮೊದಲಾರ್ಧದ ಅಂತ್ಯಕ್ಕೆ ಅಂಕ 1-1 ಆಗಿ ಸಮಬಲವಾಯಿತು.
ದ್ವಿತೀಯಾರ್ಧದಲ್ಲಿ ಪೋರ್ಚುಗಲ್ ಬಲಿಷ್ಠ ಆಟ ತೋರಿತು. 58ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಗೋಲು ಗಳಿಸಿದರು. ನಂತರ 84ನೇ ನಿಮಿಷದಲ್ಲಿ ಜೋವೊ ಕ್ಯಾನ್ಸೆಲೊ ಇನ್ನೊಂದು ಗೋಲು ಸೇರಿಸಿದರು. ಹಂಗೇರಿ ಪರ ವರ್ಗಾ 86ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರೂ ತಂಡಕ್ಕೆ ಜಯ ಸಿಗಲಿಲ್ಲ. ಅಂತಿಮವಾಗಿ ಪೋರ್ಚುಗಲ್ 3-2 ಅಂತರದಲ್ಲಿ ಪಂದ್ಯ ಗೆದ್ದಿತು.
ಈ ಜಯದಿಂದ ಪೋರ್ಚುಗಲ್ 6 ಪಂದ್ಯಗಳಲ್ಲಿ 4 ಗೆಲುವು ಮತ್ತು 2 ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಹಂಗೇರಿ ತಂಡಕ್ಕೆ 6 ಅಂಕಗಳಷ್ಟೇ ಸಿಕ್ಕಿವೆ.
ಕ್ರಿಸ್ಟಿಯಾನೊ ರೊನಾಲ್ಡೊ ಈ ಪಂದ್ಯದಲ್ಲಿ ಮಾಡಿದ ಗೋಲು ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿನ 39ನೇ ಗೋಲು. ಇದರಿಂದ ಗ್ವಾಟೆಮಾಲಾದ ಕಾರ್ಲೋಸ್ ರುಯಿಜ್ ಅವರ ದಾಖಲೆಯನ್ನು ಸಮಬಲಗೊಳಿಸಿದರು. ಲಿಯೋನೆಲ್ ಮೆಸ್ಸಿ 36 ಗೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಪೋರ್ಚುಗಲ್ ಪರ 223 ಪಂದ್ಯಗಳಲ್ಲಿ ರೊನಾಲ್ಡೊ ಒಟ್ಟು 141 ಗೋಲುಗಳನ್ನು ಗಳಿಸಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಅವರು ಇನ್ನೂ ಅಗ್ರಸ್ಥಾನದಲ್ಲಿದ್ದಾರೆ.