Bengaluru: ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ, ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ರೈತರಿಗೆ ಸಿಹಿ ಸುದ್ದಿ: ಪಿಎಂ ಕಸುಮ್-ಬಿ ಯೋಜನೆಯಡಿ ವಿದ್ಯುತ್ ಜಾಲದಿಂದ ಪಂಪ್ ಸೆಟ್ ಎಷ್ಟು ದೂರವಿದ್ದರೂ ಸಹ, ಕೃಷಿ ಪಂಪ್ ಸೆಟ್ ಅಳವಡಿಸುವ ವೆಚ್ಚದ ಅರ್ಧಭಾಗವನ್ನು ರಾಜ್ಯ ಸರ್ಕಾರವೇ ಭರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ರೈತರಿಗೆ ಹೆಚ್ಚಿನ ಸಹಾಯವಾಗಲಿದೆ.
ಬಯೋ ಡೀಸೆಲ್ ಮಾರಾಟಕ್ಕೆ ಅನುಮೋದನೆ: ರಾಜ್ಯದಲ್ಲಿ ಬಯೋ ಡೀಸೆಲ್ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಮೋದನೆ ನೀಡಲಾಗಿದೆ. ಖಾದ್ಯವಲ್ಲದ ಸಸ್ಯಜನ್ಯ ಎಣ್ಣೆ, ಬಳಸಿದ ಅಡುಗೆ ಎಣ್ಣೆ ಮತ್ತು ಇತರ ಜೈವಿಕ ಎಣ್ಣೆಯಿಂದ ಬಯೋ ಡೀಸೆಲ್ ತಯಾರಿಸಲು ಅವಕಾಶ ನೀಡಲಾಗಿದೆ. ಬಯೋ ಡೀಸೆಲ್ ಲಭ್ಯವಾಗುವಂತೆಯೇ ಡೀಸೆಲ್ ಜೊತೆಗೆ ಮಿಶ್ರಣ ಮಾಡಿ ಮಾರಾಟ ಮಾಡಲು ಸಾಧ್ಯವಾಗಲಿದೆ.
ಉಪಖನಿಜ ರಿಯಾಯಿತಿ ನಿಯಮ ತಿದ್ದುಪಡಿ: “ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 2025”ಕ್ಕೆ ಅನುಮೋದನೆ ನೀಡಲಾಗಿದೆ. ಇದರ ಉದ್ದೇಶ, ಕೃಷಿ ಹಾಗೂ ಸಾರ್ವಜನಿಕರ ಅಗತ್ಯಗಳಿಗೆ ಉಪಖನಿಜಗಳನ್ನು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡುವುದು. ನಿಯಮಗಳನ್ನು ಸರಳೀಕರಣಗೊಳಿಸುವ ಮೂಲಕ ಶುಲ್ಕ ಸೋರಿಕೆಯನ್ನು ತಡೆಯುವ ಕ್ರಮ ಕೈಗೊಳ್ಳಲಾಗಿದೆ.
ಶಿಷ್ಟಾಚಾರದ ಹೊಸ ಮಾರ್ಗಸೂಚಿ: ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಸಂಖ್ಯೆಗೆ ಮಿತಿ ಹಾಕಲಾಗಿದೆ. ರಾಜ್ಯಮಟ್ಟ, ಜಿಲ್ಲಾಮಟ್ಟ ಮತ್ತು ತಾಲೂಕುಮಟ್ಟದ ಕಾರ್ಯಕ್ರಮಗಳಲ್ಲಿ ಆಹ್ವಾನಿತರ ಪಟ್ಟಿಯನ್ನು ಸಂಬಂಧಿತ ಸಚಿವರು ಅಂತಿಮಗೊಳಿಸಲಿದ್ದಾರೆ. ಯಾವುದೇ ಸಂದರ್ಭದಲ್ಲೂ ವೇದಿಕೆ ಮೇಲೆ 13ಕ್ಕೂ ಹೆಚ್ಚು ಗಣ್ಯರಿಗೆ ಸ್ಥಾನ ಇರುವುದಿಲ್ಲ.
ಹೊರಗುತ್ತಿಗೆ ನೌಕರರ ಬಗ್ಗೆ ಉಪಸಮಿತಿ: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುವ ನೌಕರರ ಹಿತಾಸಕ್ತಿಯನ್ನು ರಕ್ಷಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ನೌಕರರ ಸೇವಾ ಭದ್ರತೆ ಮತ್ತು ಸೌಲಭ್ಯಗಳ ಬಗ್ಗೆ ಶಿಫಾರಸು ಮಾಡಲಿದೆ.
ಇತರ ತೀರ್ಮಾನಗಳು: ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಜೊತೆಗೆ, 35 ಸಂಚಾರಿ ಆರೋಗ್ಯ ಘಟಕಗಳನ್ನು ದುರಸ್ತಿ ಮಾಡಿ, ಹೊಸ ಉಪಕರಣಗಳನ್ನು ಅಳವಡಿಸಿ “ಕನೆಕ್ಟೆಡ್ ಹೆಲ್ತ್ ಈಕೊ-ಸಿಸ್ಟಮ್”ಗೆ ಪರಿವರ್ತಿಸಲು ನಿರ್ಧರಿಸಲಾಗಿದೆ.







